ವಿಜಯಸಾಕ್ಷಿ ಸುದ್ದಿ, ಗದಗ: ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ 12ನೇ ರಾಜ್ಯ ಮಟ್ಟದ ಕನ್ನಡ ಅಣಕು ನ್ಯಾಯಾಲಯ (ಮೂಟ್ ಕೋರ್ಟ್) ಸ್ಪರ್ಧೆಯಲ್ಲಿ ಸ್ಥಳೀಯ ಕೆಎಲ್‌ಇ ಸಂಸ್ಥೆಯ ಎಸ್.ಎ. ಮಾನ್ವಿ ಕಾನೂನು ಕಾಲೇಜು ರನ್ನರ್‌ಅಪ್ ಸ್ಥಾನ ಪಡೆದು ಗಮನ ಸೆಳೆದಿದೆ.
ಸ್ಪರ್ಧೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ದ್ವಿತೀಯ ಸ್ಥಾನ ಗಳಿಸಿದ್ದು, ಜೊತೆಗೆ ಅತ್ಯುತ್ತಮ ವಾದ ಪತ್ರ (ಬೆಸ್ಟ್ ಮೆಮೋರಿಯಲ್) ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.
ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಾದ ಶಿವಶಂಕರ್, ರಂಜಿತಾ ಜಿ. ಹಾಗೂ ಅರುಣ್ ಸ್ಪರ್ಧೆಯಲ್ಲಿ ಭಾಗವಹಿಸಿ ಈ ಸಾಧನೆ ಮಾಡಿದ್ದಾರೆ. ಅವರ ಸಾಧನೆಗೆ ಕೆಎಲ್‌ಇ ಸಂಸ್ಥೆಯ ಅಧ್ಯಕ್ಷರು, ನಿರ್ದೇಶಕರು, ಸ್ಥಳೀಯ ಆಡಳಿತ ಮಂಡಳಿ ಹಾಗೂ ಕಾಲೇಜಿನ ಬೋಧಕ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆ ಕಾಲೇಜಿನ ಶೈಕ್ಷಣಿಕ ಗುಣಮಟ್ಟ ಮತ್ತು ಕಾನೂನು ಶಿಕ್ಷಣ ಕ್ಷೇತ್ರದಲ್ಲಿನ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಸಂಜೀವ್ ಎಂ. ಹುಲ್ಲೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



