ಕಲಬುರಗಿ: ಅಕ್ರಮ ಆಸ್ತಿ ಗಳಿಕೆ ಆರೋಪದಡಿ ನಿವೃತ್ತ ಪಂಚಾಯತ್ ರಾಜ್ ಇಲಾಖೆಯ ಸೂಪರಿಂಟೆಂಡಿಂಗ್ ಇಂಜಿನಿಯರ್ ಮಾಣಿಕರಾವ್ ಕನಕಟ್ಟೆ ಅವರಿಗೆ ಸೇರಿದ ನಿವಾಸಗಳು ಮತ್ತು ಆಸ್ತಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಎಸ್‌ಪಿ ಸಿದ್ದರಾಜು ನೇತೃತ್ವದ ತಂಡ ಕಲಬುರಗಿ ನಗರದ ಗೊದಾತಾಯಿ ಕಾಲೋನಿಯಲ್ಲಿರುವ ಮನೆ ಸೇರಿದಂತೆ ಐದು ಸ್ಥಳಗಳಲ್ಲಿ ಏಕಕಾಲಕ್ಕೆ ಶೋಧ ಕಾರ್ಯಾಚರಣೆ ಆರಂಭಿಸಿದೆ. ಬೀದರ್ ಜಿಲ್ಲೆಯ ಹಳ್ಳಿಖೇಡ ಗ್ರಾಮದಲ್ಲಿರುವ ನಿವಾಸ, ತೋಟದ ಮನೆ ಹಾಗೂ ಹುಮನಾಬಾದ್‌ನ ಎರಡು ವಾಣಿಜ್ಯ ಸಂಕೀರ್ಣಗಳ ಮೇಲೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ದಾಳಿ ವೇಳೆ ಮಾಣಿಕರಾವ್ ಕನಕಟ್ಟೆ ಮನೆಯಲ್ಲಿ ಇರಲಿಲ್ಲ. ಅವರು ಬೆಂಗಳೂರಿನಲ್ಲಿರುವ ಮಾಹಿತಿ ಲಭ್ಯವಾಗಿದ್ದು, ವಿಚಾರಣೆಗೆ ಕಲಬುರಗಿಗೆ ಹಾಜರಾಗುವಂತೆ ಲೋಕಾಯುಕ್ತ ಅಧಿಕಾರಿಗಳು ಸೂಚಿಸಿದ್ದಾರೆ.
ಶೋಧದ ವೇಳೆ ಹಳ್ಳಿಖೇಡ ಗ್ರಾಮದಲ್ಲಿ ಸುಮಾರು 18 ಎಕರೆ ತೋಟ ಇರುವ ಮಾಹಿತಿ ಪತ್ತೆಯಾಗಿದ್ದು, ಆಸ್ತಿ ದಾಖಲೆಗಳು, ಹೂಡಿಕೆ ವಿವರಗಳು ಹಾಗೂ ಹಣಕಾಸು ವ್ಯವಹಾರಗಳ ಬಗ್ಗೆ ಅಧಿಕಾರಿಗಳು ಸಮಗ್ರ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ವಿವಿಧ ಸ್ಥಳಗಳಲ್ಲಿ ದಾಖಲೆಗಳ ಪರಿಶೀಲನೆ ಮುಂದುವರಿದಿದ್ದು, ತನಿಖೆ ಇನ್ನಷ್ಟು ತೀವ್ರಗೊಂಡಿದೆ.



