ಹುಬ್ಬಳ್ಳಿ: ಕೌಟುಂಬಿಕ ಕಲಹ, ಪೊಲೀಸ್ ಠಾಣೆ ಸುತ್ತಾಟ ಹಾಗೂ ದಾಂಪತ್ಯ ಬಿಕ್ಕಟ್ಟಿನ ನಡುವೆ ವ್ಯಕ್ತಿಯೊಬ್ಬ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯ ಬೆಂಗೇರಿ ಪ್ರದೇಶದಲ್ಲಿ ನಡೆದಿದೆ.
ಸಂತೋಷ್ ಅಳ್ಳೂರು (39) ಮೃತ ವ್ಯಕ್ತಿಯಾಗಿದ್ದು, ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೆ ಮುನ್ನ ಅವರು ಡೆತ್‌ನೋಟ್ ಬರೆದಿಟ್ಟು ಹೋಗಿರುವುದಾಗಿ ತಿಳಿದುಬಂದಿದೆ.
ಸಂತೋಷ್ ಮತ್ತು ಅವರ ಪತ್ನಿ ಸುಮಾರು 18 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ದಂಪತಿಗೆ ಮೂವರು ಮಕ್ಕಳಿದ್ದು, ಇತ್ತೀಚಿನ ದಿನಗಳಲ್ಲಿ ಇಬ್ಬರ ನಡುವೆ ಕೌಟುಂಬಿಕ ಕಲಹ ತೀವ್ರಗೊಂಡಿತ್ತು ಎನ್ನಲಾಗಿದೆ.
ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ನಂತರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಪತಿಯಿಂದ ದೂರವಾಗಲು ಮುಂದಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಕುಟುಂಬದವರ ಆರೋಪದ ಪ್ರಕಾರ, ಪೊಲೀಸ್ ಠಾಣೆಗೆ ಪದೇ ಪದೇ ಕರೆಸಿ ಕಿರುಕುಳ ನೀಡಲಾಗುತ್ತಿತ್ತು. ಇದರಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಸಂತೋಷ್ ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆ ಬಳಿಕ ಕುಟುಂಬಸ್ಥರು ಪತ್ನಿ ಹಾಗೂ ಸಂಬಂಧಿತ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸಾವಿನ ಹಿಂದಿನ ಕಾರಣಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡೆತ್‌ನೋಟ್ ಸೇರಿದಂತೆ ಎಲ್ಲಾ ಆಯಾಮಗಳ ಬಗ್ಗೆ ತನಿಖೆ ನಡೆಯುತ್ತಿದೆ.



