ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ”: “ಸತ್ತಿರುವವರನ್ನು ಮತದಾರರ ಪಟ್ಟಿಯಿಂದ ತೆಗೆಯಬೇಕಿತ್ತು. ಆದರೆ ಬದುಕಿರುವ ಜನರನ್ನೇ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇದು ಜನಾಂಗ ಹತ್ಯೆಗೆ ಸಮಾನ. ಬದುಕಿರುವವರನ್ನೇ ಸತ್ತವರಂತೆ ಮಾಡುವುದೇ ಎಸ್ಐಆರ್. ಇದನ್ನು ನಾವೆಲ್ಲರೂ ಒಗ್ಗಟ್ಟಾಗಿ ವಿರೋಧಿಸಬೇಕು” ಎಂದು ಸಾಮಾಜಿಕ ಹೋರಾಟಗಾರ್ತಿ ಸವಿತಾ ಬನ್ನಾಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿಯಲ್ಲಿ ನಡೆದ ಮೇ ಸಾಹಿತ್ಯ ಮೇಳದ ಎರಡನೇ ದಿನ ಎಸ್ಐಆರ್ ರದ್ದುಗೊಳಿಸುವಂತೆ ಬೃಹತ್ ಪ್ರತಿಭಟನಾ ಜಾಥಾ ನಡೆಯಿತು. ಹಿರಿಯ ಕಾದಂಬರಿಕಾರ ಕುಂ. ವೀರಭದ್ರಪ್ಪ (ಕುಂವೀ) ಅವರು ಚೆನ್ನಮ್ಮ ವೃತ್ತದಿಂದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದವರೆಗೆ ನಡೆದ ಜಾಥಾಗೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಚಿಂತಕ ಡಾ. ಅಶೋಕ ಶೆಟ್ಟರ್, “ಭಾರತದಲ್ಲಿ ಸಂವಿಧಾನದ ಮೇಲೆಯೇ ದಾಳಿ ನಡೆಯುತ್ತಿದೆ. ಎಸ್ಐಆರ್ ಎಂಬ ಹೆಸರಿನಲ್ಲಿ ಕೋಟ್ಯಾಂತರ ಜನರನ್ನು ಚುನಾವಣಾ ಪ್ರಕ್ರಿಯೆಯಿಂದ ಹೊರಗಿಡುವ ಯತ್ನ ನಡೆಯುತ್ತಿದೆ. ಕರ್ನಾಟಕದಲ್ಲೂ ಇದನ್ನು ಜಾರಿಗೊಳಿಸಲು ಅವಕಾಶ ನೀಡಬಾರದು” ಎಂದು ಎಚ್ಚರಿಸಿದರು.
ಹೋರಾಟಗಾರ ರಂಜಾನ್ ದರ್ಗಾ ಮಾತನಾಡಿ, “ಸಂವಿಧಾನ ವಿರೋಧಿ ಕ್ರಮಗಳ ಮೂಲಕ ಬಡವರು, ಓಬಿಸಿ ಹಾಗೂ ಹಿಂದುಳಿದ ವರ್ಗಗಳನ್ನು ಚುನಾವಣಾ ವ್ಯವಸ್ಥೆಯಿಂದ ಹೊರ ತಳ್ಳಲಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಎಸ್ಐಆರ್ ಮೂಲಕ ಲಕ್ಷಾಂತರ ಜನರನ್ನು ಮತದಾನದ ಹಕ್ಕಿನಿಂದ ವಂಚಿಸಲಾಗಿದೆ. ಕರ್ನಾಟಕದಲ್ಲಿ ಇದನ್ನು ಜಾರಿಗೊಳಿಸದಂತೆ ಸಾಹಿತ್ಯ ಮೇಳವೇ ಹೋರಾಟದ ವೇದಿಕೆಯಾಗಬೇಕು” ಎಂದು ಕರೆ ನೀಡಿದರು.
ಪ್ರತಿಭಟನಾ ಜಾಥಾದಲ್ಲಿ ಮೂಡ್ನಾಕೂಡ ಚಿನ್ನಸ್ವಾಮಿ, ಶ್ರೀಪಾದ್ ಭಟ್ ಸೇರಿದಂತೆ ನೂರಾರು ಸಾಹಿತ್ಯಾಸಕ್ತರು, ಹೋರಾಟಗಾರರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
“ಎಸ್ಐಆರ್ ಹೆಸರಿನಲ್ಲಿ ಜನರನ್ನು ಚುನಾವಣಾ ಪ್ರಕ್ರಿಯೆಯಿಂದ ಹೊರಗಿಡುವ ಯತ್ನ ನಡೆಯುತ್ತಿದೆ.”
ಡಾ. ಅಶೋಕ ಶೆಟ್ಟರ್, ಸಾಹಿತಿ



