ವಿಜಯಸಾಕ್ಷಿ ಸುದ್ದಿ, ಗದಗ: ಚಿಕ್ಕಹಂದಿಗೋಳ ಗ್ರಾಮ ಪಂಚಾಯಿತಿಯ ಪಿಡಿಒ ಶಶಿಧರ ಕಪ್ಪರದ ಹಾಗೂ ವಾಟರ್‌ಮನ್ ಅರ್ಜುನ್ ಓಲೇಕಾರ ಅವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.
ಈ ಕುರಿತು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರಿಗೆ ಮನವಿ ಸಲ್ಲಿಸಿದ ಸಂಘದ ಮುಖಂಡರು, ಜೂನ್ 16ರಂದು ಸರ್ಕಾರಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ದುಂದೂರ ಗ್ರಾಮದ ಗಂಗಯ್ಯ ಗಣಾಚಾರಿ ಹಾಗೂ ಇತರರು ಹಲ್ಲೆ ನಡೆಸಿರುವುದು ಖಂಡನೀಯ ಮತ್ತು ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು.
ಸಾರ್ವಜನಿಕ ಸೇವೆಯಲ್ಲಿ ನಿರತರಾಗಿರುವ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ಹಲ್ಲೆ ನಡೆಸುವುದು ಕಾನೂನುಬಾಹಿರ ಕೃತ್ಯವಾಗಿದ್ದು, ಇದು ಸರ್ಕಾರಿ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುವ ಗಂಭೀರ ಅಪರಾಧವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಿಬ್ಬಂದಿ ಸಾರ್ವಜನಿಕರೊಂದಿಗೆ ನೇರ ಸಂಪರ್ಕದಲ್ಲಿದ್ದು ಸೇವೆ ಸಲ್ಲಿಸುತ್ತಾರೆ. ಇಂತಹ ಘಟನೆಗಳು ಸಿಬ್ಬಂದಿಯಲ್ಲಿ ಭಯದ ವಾತಾವರಣ ಸೃಷ್ಟಿಸುವುದರ ಜೊತೆಗೆ ಸಾರ್ವಜನಿಕ ಸೇವೆಗಳ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತವೆ ಎಂದು ಹೇಳಿದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಿ ತಕ್ಷಣ ಬಂಧಿಸಬೇಕು. ಜೊತೆಗೆ ಸರ್ಕಾರಿ ನೌಕರರು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಸೂಕ್ತ ರಕ್ಷಣೆ ಒದಗಿಸಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷ ಡಾ. ರವಿ ಎಲ್. ಗುಂಜೀಕರ, ಡಿ.ಎಸ್. ತಳವಾರ, ಎಂ.ಎಂ. ನಿಟ್ಟಾಲಿ, ಎಂ.ವೈ. ಮಲಕಶೆಟ್ಟಿ, ರಾಜು ಕಂಟಿಗೊಣ್ಣವರ, ಸಿದ್ದಪ್ಪ ಲಿಂಗದಾಳ, ಎಸ್.ಎಸ್. ಪಾರ್ವತಿಮಠ, ಶಿವಪ್ಪ ಹದ್ಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಸರ್ಕಾರಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ಹಲ್ಲೆ ನಡೆಸುವುದು ಗಂಭೀರ ಅಪರಾಧ. ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು.”
– ಡಾ. ಬಸವರಾಜ ಬಳ್ಳಾರಿ, ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ, ಸರ್ಕಾರಿ ನೌಕರರ ಸಂಘ



