ಗದಗ: ಮಾದಕ ವಸ್ತುಗಳ ವಿರುದ್ಧ ಸಮರ ಸಾರಿರುವ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಲಕ್ಷಾಂತರ ರೂ. ಮೌಲ್ಯದ 2.365 ಕೆಜಿ ಗಾಂಜಾವನ್ನು ಜಪ್ತಿ ಮಾಡಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೇವಸ್ಥಾನವೊಂದರ ಬಳಿ ಗಾಂಜಾ ಸೇವಿಸುತ್ತಿದ್ದ ಇಬ್ಬರನ್ನು ಬಂಧಿಸಿದ ಪ್ರಕರಣದ ತನಿಖೆ ಮುಂದುವರಿದಂತೆ ಗದಗ-ಬೆಟಗೇರಿ ಮೂಲದ ಮತ್ತೊಂದು ಗಾಂಜಾ ಪೂರೈಕೆ ಜಾಲ ಬೆಳಕಿಗೆ ಬಂದಿದ್ದು, ಪೊಲೀಸರು ಜಾಲವನ್ನು ಭೇದಿಸಿದ್ದಾರೆ.
ಜೂನ್ 15ರಂದು ಲಕ್ಷ್ಮೇಶ್ವರ ನಗರದ ಮುಕ್ತಿನಗರದ ಅಗಸ್ತ್ಯತೀರ್ಥ ದೇವಸ್ಥಾನದ ಸಮೀಪ ಗಾಂಜಾ ಸೇವನೆ ನಡೆಸುತ್ತಿದ್ದ ಆರೋಪಿಗಳಾದ ಸಂತೋಷ ಬಸವರಾಜ ಉಪ್ಪಾರ ಹಾಗೂ ಸಾದಿಕ್ ರಿಯಾಜ್ ಅಹ್ಮದ್ ರಿತ್ತಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ಸಂಬಂಧ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆ 1985ರ ಕಲಂ 27(ಬಿ) ಅಡಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು, ಬಂಧಿತರಿಂದ ದೊರೆತ ಮಾಹಿತಿಯ ಆಧಾರದ ಮೇಲೆ ಜೂನ್ 18ರಂದು ಗದಗದಿಂದ ಲಕ್ಷ್ಮೇಶ್ವರಕ್ಕೆ ಗಾಂಜಾ ಸಾಗಣೆ ಮಾಡುತ್ತಿದ್ದ ಮೂವರು ಆರೋಪಿಗಳ ಮೇಲೆ ದಾಳಿ ನಡೆಸಿದರು. ಈ ವೇಳೆ ನಾಗರಾಜ ದೊಡ್ಡಪ್ಪ ಮುತಗಾರ, ಪ್ರಶಾಂತ ಕರಿಯಪ್ಪ ಕಟಗೇರಿ ಹಾಗೂ ಗಂಗಪ್ಪ ಬಾಬು ನಾರಾಯಣ ಚವ್ಹಾಣ ಎಂಬ ಆರೋಪಿಗಳನ್ನು ಬಂಧಿಸಿ, ಅವರ ವಶದಲ್ಲಿದ್ದ 2.365 ಕೆಜಿ ಗಾಂಜಾ ವಶಪಡಿಸಿಕೊಂಡರು.
ಪೊಲೀಸರು ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯ ಕಲಂ 20(ಬಿ) ಅಡಿ ಹೆಚ್ಚುವರಿ ಆರೋಪಗಳನ್ನು ಸೇರಿಸಿದ್ದು, ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ಯಶಸ್ವಿ ಕಾರ್ಯಾಚರಣೆಯನ್ನು ಪಿಎಸ್‌ಐ ಟಿ.ಕೆ. ರಾಠೋಡ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ನಡೆಸಿದ್ದು, ತನಿಖಾಧಿಕಾರಿಯಾಗಿ ಪಿಎಸ್‌ಐ ನಾಗರಾಜ ಗಡದ ಕಾರ್ಯನಿರ್ವಹಿಸಿದ್ದಾರೆ. ಪ್ರಕರಣ ಭೇದಿಸಲು ಮಾರ್ಗದರ್ಶನ ನೀಡಿದ ಗದಗ ಉಪವಿಭಾಗದ ಡಿವೈಎಸ್‌ಪಿ ಮುರ್ತುಜಾ ಖಾದ್ರಿ ಶಿರಹಟ್ಟಿ ಸಿಪಿಐ ಬಿ.ವಿ. ನ್ಯಾಮಗೌಡ ಅವರ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಶ್ಲಾಘಿಸಿದ್ದಾರೆ.



