ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ರೈತರು ತಮ್ಮ ಜಮೀನುಗಳಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ಆದ್ಯತೆ ನೀಡಿ, ಭವಿಷ್ಯದಲ್ಲಿ ಎದುರಾಗಬಹುದಾದ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸಜ್ಜಾಗಬೇಕು ಎಂದು ಉಪ ಕೃಷಿ ನಿರ್ದೇಶಕಿ ಸ್ಪೂರ್ತಿ ಜಿ.ಎಸ್. ಹೇಳಿದರು.
ತಾಲೂಕಿನ ಬೆಳ್ಳಟ್ಟಿ ಗ್ರಾಮದ ಎಪಿಎಂಸಿ ಸಭಾಭವನದಲ್ಲಿ ಕೃಷಿ ಇಲಾಖೆ ವತಿಯಿಂದ ಖೇತ್ ಬಚಾವೋ ಅಭಿಯಾನ-ಆತ್ಮ ಯೋಜನೆಯಡಿ ಹಮ್ಮಿಕೊಂಡಿದ್ದ ಕಿಸಾನ ಗೋಷ್ಠಿ ಹಾಗೂ ಮರುಭೂಮೀಕರಣ ಮತ್ತು ಬರ ತಡೆಗಟ್ಟುವಿಕೆ ವಿಶ್ವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ, ರೈತರು ಸಾಧ್ಯವಾದಷ್ಟು ಸಾವಯವ ಕೃಷಿಯತ್ತ ಒಲವು ತೋರಬೇಕು. ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಭೂಮಿಯ ಫಲವತ್ತತೆ ಕುಂಠಿತವಾಗುತ್ತಿದ್ದು, ಮುಂದಿನ ಪೀಳಿಗೆಗೆ ಫಲವತ್ತಾದ ಭೂಮಿಯನ್ನು ಉಳಿಸಿಕೊಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.
ಎಲ್ಲ ರೈತರು ಕಡ್ಡಾಯವಾಗಿ ಎಫ್‌ಐಡಿ (FID) ಮಾಡಿಸಿಕೊಳ್ಳಬೇಕು. ಅಗತ್ಯಕ್ಕೆ ಅನುಗುಣವಾಗಿ ಯೂರಿಯಾ ಸೇರಿದಂತೆ ರಸಗೊಬ್ಬರಗಳನ್ನು ಎಫ್‌ಐಡಿ ಮೂಲಕವೇ ಪಡೆಯುವ ವ್ಯವಸ್ಥೆಗೆ ಸಹಕರಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ 2025-26ನೇ ಸಾಲಿನ ಆತ್ಮ ಯೋಜನೆಯಡಿ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ರೈತರನ್ನು ಸನ್ಮಾನಿಸಲಾಯಿತು.
ಮೋಹನ ಗುತ್ತೆಮ್ಮನವರ, ಎನ್.ಎಚ್. ಬಂಡಿ, ಬಸವರಾಜ ನಾವಿ ಮಾತನಾಡಿದರು. ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ ಕಾಶಪ್ಪನವರ, ಮಹೇಶ ಬಡ್ನಿ, ಚಂದ್ರಶೇಖರಗೌಡ ಎಸ್.ಎನ್., ಮಂಜುನಾಥ ಭರಮಗೌಡ್ರ, ಆರ್.ಸಿ. ಚಾಕಲಬ್ಬಿ, ಎಂ.ಎಸ್. ಪೂಜಾರ, ಡಿ.ಕೆ. ಅಚಲಕರ್, ನೀಲನಗೌಡ ಪಾಟೀಲ, ಶ್ರೀನಿವಾಸ ಅಳವಂಡಿ, ಅಶೋಕ ಕಪ್ಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಇಂದಿನ ಮಣ್ಣು ಮತ್ತು ನೀರಿನ ಸಂರಕ್ಷಣೆಯೇ ನಾಳಿನ ಕೃಷಿಗೆ ಭದ್ರ ಬುನಾದಿ; ಬರ ಎದುರಿಸಲು ರೈತರು ಈಗಿನಿಂದಲೇ ಸಿದ್ಧರಾಗಬೇಕು.”
ಸ್ಪೂರ್ತಿ ಜಿ.ಎಸ್.
ಉಪ ಕೃಷಿ ನಿರ್ದೇಶಕಿ



