ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿಕ್ಷಕರಿಗೆ ತರಬೇತಿ, ಕಾರ್ಯಾಗಾರ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಕೇಂದ್ರವಾಗಿರುವ ಶಿರಹಟ್ಟಿ ಕ್ಷೇತ್ರ ಸಂಪನ್ಮೂಲ ಕೇಂದ್ರ (ಬಿಆರ್‌ಸಿ) ಮೂಲ ಸೌಲಭ್ಯಗಳ ಕೊರತೆಯಿಂದ ತತ್ತರಿಸಿದ್ದು, “ಶಿಕ್ಷಕರಿಗೆ ಮಾದರಿಯಾಗಬೇಕಾದ ಕೇಂದ್ರವೇ ದುಸ್ಥಿತಿಗೆ ತಲುಪಿರುವುದು ವಿಪರ್ಯಾಸ” ಎಂಬ ಮಾತುಗಳು ಶಿಕ್ಷಕರ ವಲಯದಲ್ಲಿ ಕೇಳಿ ಬರುತ್ತಿವೆ.
ತಾಲೂಕಿನ ವಿವಿಧ ಶಾಲೆಗಳ ಶಿಕ್ಷಕರಿಗೆ ತರಬೇತಿ, ಕಾರ್ಯಾಗಾರ, ಸಭೆ ಸೇರಿದಂತೆ ಅನೇಕ ಶೈಕ್ಷಣಿಕ ಚಟುವಟಿಕೆಗಳು ನಡೆಯುವ ಈ ಕೇಂದ್ರ ಹಲವು ವರ್ಷಗಳಿಂದ ದುರಸ್ತಿಯಾಗದೇ ಉಳಿದಿದ್ದು, ಈಗ ಹೆಸರಿಗೆ ಮಾತ್ರ ಕ್ಷೇತ್ರ ಸಂಪನ್ಮೂಲ ಕೇಂದ್ರ ಎಂಬ ಸ್ಥಿತಿಗೆ ತಲುಪಿದೆ ಎಂಬ ಆರೋಪ ವ್ಯಕ್ತವಾಗಿದೆ.
ಹಾಳಾಗುತ್ತಿರುವ ಉಪಗ್ರಹ ಆಧಾರಿತ ತರಬೇತಿ ಪರಿಕರಗಳು
ಶಿಕ್ಷಕರಿಗೆ ಉಪಗ್ರಹ ಆಧಾರಿತ ಶೈಕ್ಷಣಿಕ ಕಾರ್ಯಕ್ರಮಗಳು ಹಾಗೂ ಟೆಲಿಕಾನ್ಫರೆನ್ಸ್‌ಗಳ ಮೂಲಕ ತರಬೇತಿ ನೀಡಲು ಅಳವಡಿಸಲಾಗಿದ್ದ ರೋಟ್ (Receive Only Terminal) ಸೇರಿದಂತೆ ವಿವಿಧ ಪರಿಕರಗಳು ದುರಸ್ತಿಯಲ್ಲಿವೆ. ಇವುಗಳನ್ನು ಸರಿಪಡಿಸುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಲಕ್ಷಾಂತರ ರೂ. ಮೌಲ್ಯದ ಪರಿಕರಗಳು ಹಾಳಾಗುವ ಹಂತ ತಲುಪಿವೆ ಎಂದು ಶಿಕ್ಷಕರು ಆರೋಪಿಸಿದ್ದಾರೆ.
ಕುಡಿಯುವ ನೀರಿಗೂ ಪರದಾಟ
ಕೇಂದ್ರದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯೇ ಇಲ್ಲ. ತರಬೇತಿಗಾಗಿ ಆಗಮಿಸುವ ಶಿಕ್ಷಕರು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಶೌಚಾಲಯಗಳು ನಿರ್ವಹಣೆಯ ಕೊರತೆಯಿಂದ ಗಬ್ಬೆದ್ದು ನಾರುತ್ತಿದ್ದು, ಬಳಕೆಗೆ ಯೋಗ್ಯವಾಗಿಲ್ಲ.
ಕಚೇರಿ ಆವರಣದಲ್ಲಿ ಎಲ್ಲೆಂದರಲ್ಲಿ ಡೆಡ್‌ಸ್ಟಾಕ್ ಸಾಮಗ್ರಿಗಳು ಬಿದ್ದಿವೆ. ಕಸ-ಕಡ್ಡಿಗಳು ತುಂಬಿಕೊಂಡಿದ್ದು, ಸ್ವಚ್ಛತೆ ಸಂಪೂರ್ಣವಾಗಿ ಮರೀಚಿಕೆಯಾಗಿದೆ. ತಂತಿ ಬೇಲಿ ಇಲ್ಲದ ಕಾರಣ ಭದ್ರತೆಯ ಕೊರತೆಯೂ ಕಾಡುತ್ತಿದೆ.


ಇತ್ತೀಚೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಲೋಕಾಯುಕ್ತ ದಾಳಿ ನಡೆದ ಬೆನ್ನಲ್ಲೇ, ಅದರ ಪಕ್ಕದಲ್ಲಿರುವ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿಯೂ ಶಿಕ್ಷಕರಿಂದ ಹಣ ವಸೂಲಿ ಆರೋಪಗಳು ಕೇಳಿ ಬರುತ್ತಿವೆ. ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಗಂಭೀರ ತನಿಖೆ ನಡೆಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಉಪನಿರ್ದೇಶಕ ಆರ್.ಎಸ್. ಬುರಡಿ, ಕ್ಷೇತ್ರ ಸಂಪನ್ಮೂಲ ಕೇಂದ್ರದ ದುರಸ್ತಿ ಕುರಿತು ಪ್ರಸ್ತಾವನೆ ತರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
“ಶಿಕ್ಷಕರಿಗೆ ಗುಣಮಟ್ಟದ ತರಬೇತಿ ನೀಡಬೇಕಾದ ಕ್ಷೇತ್ರ ಸಂಪನ್ಮೂಲ ಕೇಂದ್ರವೇ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಕಟ್ಟಡ, ಶೌಚಾಲಯ, ಕುಡಿಯುವ ನೀರು ಹಾಗೂ ತರಬೇತಿ ಪರಿಕರಗಳ ದುರಸ್ತಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು.”
— ಹೆಸರು ಹೇಳಲು ಬಯಸದ ಶಿಕ್ಷಕರು
8-9 ವರ್ಷಗಳಿಂದ ಸುಣ್ಣ-ಬಣ್ಣವೇ ಇಲ್ಲ
ಸುಮಾರು 8-9 ವರ್ಷಗಳಿಂದ ಕಟ್ಟಡಕ್ಕೆ ಸುಣ್ಣ-ಬಣ್ಣ ಬಳಿಯದೇ ಇರುವುದರಿಂದ ಗೋಡೆಗಳು ಬಿರುಕು ಬಿಟ್ಟಿದ್ದು, ಕಚೇರಿ ಜೀರ್ಣಾವಸ್ಥೆಯತ್ತ ಸಾಗುತ್ತಿದೆ. ಇದಕ್ಕೆ ಕಾಯಕಲ್ಪ ನೀಡಬೇಕಾದ ಅಧಿಕಾರಿಗಳು ಆಸಕ್ತಿ ವಹಿಸದಿರುವುದು ಶಿಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ.



