ವಿಜಯಸಾಕ್ಷಿ ಸುದ್ದಿ, ಗದಗ: ಗೌರವಾನ್ವಿತ ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಜುಲೈ 11, 2026ರಂದು ಜಿಲ್ಲೆಯಾದ್ಯಂತ ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗಿದ್ದು, ಸಾರ್ವಜನಿಕರು ಹಾಗೂ ಪಕ್ಷಗಾರರು ತಮ್ಮ ವ್ಯಾಜ್ಯಗಳನ್ನು ರಾಜೀ ಸಂಧಾನದ ಮೂಲಕ ತ್ವರಿತವಾಗಿ ಇತ್ಯರ್ಥಪಡಿಸಿಕೊಳ್ಳುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮನವಿ ಮಾಡಿದೆ.
ಲೋಕ ಅದಾಲತ್ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವುದರಿಂದ ನ್ಯಾಯಾಲಯದ ವೆಚ್ಚ, ಸಮಯ ಹಾಗೂ ಅನಗತ್ಯ ಆರ್ಥಿಕ ಹೊರೆ ತಪ್ಪುವುದರ ಜೊತೆಗೆ ಪರಸ್ಪರ ಬಾಂಧವ್ಯವನ್ನು ಉಳಿಸಿಕೊಳ್ಳಲು ಸಹ ಸಾಧ್ಯವಾಗಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಶ್ರೀಮತಿ ನಾಗವೇಣಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸಿವಿಲ್ ದಾವೆಗಳು, ಭೂಸ್ವಾಧೀನ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ದರಖಾಸ್ತು ಅರ್ಜಿಗಳು, ಕಾರ್ಮಿಕ ಪ್ರಕರಣಗಳು, ಎಂಎಂಆರ್‌ಡಿ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳು, ವೈವಾಹಿಕ ವ್ಯಾಜ್ಯಗಳು ಹಾಗೂ ರಾಜೀ ಆಗಲು ಅರ್ಹವಿರುವ ಕ್ರಿಮಿನಲ್ ಕಂಪೌಂಡಬಲ್ ಪ್ರಕರಣಗಳು ಸೇರಿದಂತೆ ಹಲವಾರು ಪ್ರಕರಣಗಳನ್ನು ರಾಜೀ ಸಂಧಾನಕ್ಕಾಗಿ ಗುರುತಿಸಲಾಗಿದೆ.
ಸಂಬಂಧಿತ ವಕೀಲರು ಹಾಗೂ ಪಕ್ಷಗಾರರಿಗೆ ರಾಜೀ ಸಂಧಾನದಿಂದ ಆಗುವ ಪ್ರಯೋಜನಗಳ ಕುರಿತು ಮುಂಚಿತವಾಗಿ ಮಾಹಿತಿ ನೀಡಿ, ಸೌಹಾರ್ದಯುತ ಪರಿಹಾರಕ್ಕೆ ಪ್ರೋತ್ಸಾಹಿಸಲಾಗುತ್ತಿದೆ. ಜುಲೈ 11ರಂದು ನಡೆಯುವ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ವಕೀಲರು, ಕಕ್ಷಿದಾರರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿ ತಮ್ಮ ವ್ಯಾಜ್ಯಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಲೋಕ ಅದಾಲತ್ ನ್ಯಾಯದ ವೇಗದ ದಾರಿ. ಪರಸ್ಪರ ಒಪ್ಪಂದದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡು ಸಮಯ, ಹಣ ಹಾಗೂ ಸಂಬಂಧಗಳನ್ನು ಉಳಿಸಿಕೊಳ್ಳುವ ಅಪರೂಪದ ಅವಕಾಶ ಇದಾಗಿದೆ.”
ಶ್ರೀಮತಿ ನಾಗವೇಣಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ



