ಬೆಂಗಳೂರು: ರಾಜ್ಯದ ಸರ್ಕಾರಿ ಹೈಸ್ಕೂಲ್‌ಗಳಲ್ಲಿ ಶಿಕ್ಷಕರ ಕೊರತೆಯನ್ನು ನಿವಾರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಪದವಿ ಪೂರ್ವ ಶಿಕ್ಷಣ ನೇಮಕಾತಿ ನಿಯಮಗಳು–2013ಕ್ಕೆ ತಿದ್ದುಪಡಿ ತರಲು ಮುಂದಾಗಿದೆ. ಹೊಸ ಕರಡು ನಿಯಮ ಜಾರಿಯಾದರೆ, ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಇನ್ನು ಮುಂದೆ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೂ ಪಾಠ ಮಾಡಬೇಕಾಗುತ್ತದೆ.
ಈ ಸಂಬಂಧ ಸರ್ಕಾರ ಈಗಾಗಲೇ ತಿದ್ದುಪಡಿಯ ಕರಡು ನಿಯಮವನ್ನು ಪ್ರಕಟಿಸಿದ್ದು, ಸಾರ್ವಜನಿಕರು ಹಾಗೂ ಸಂಬಂಧಿತ ವಲಯಗಳಿಂದ 7 ದಿನಗಳೊಳಗೆ ಆಕ್ಷೇಪಣೆ ಅಥವಾ ಸಲಹೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆಕ್ಷೇಪಣೆಗಳ ಪರಿಶೀಲನೆಯ ಬಳಿಕ ಅಂತಿಮ ನಿಯಮವನ್ನು ಜಾರಿಗೆ ತರಲಾಗುವ ಸಾಧ್ಯತೆ ಇದೆ.
ಪ್ರಸ್ತುತ ಜಾರಿಯಲ್ಲಿರುವ ನಿಯಮಗಳ ಪ್ರಕಾರ, ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳಿಗೆ ಮಾತ್ರ ಬೋಧನೆ ಮಾಡುವ ಜವಾಬ್ದಾರಿ ಇದೆ. ಆದರೆ ಹೊಸ ತಿದ್ದುಪಡಿಯಿಂದ ಅವರ ಸೇವಾ ವ್ಯಾಪ್ತಿಯನ್ನು ಹೈಸ್ಕೂಲ್ ಹಂತಕ್ಕೂ ವಿಸ್ತರಿಸಲು ಸರ್ಕಾರ ಮುಂದಾಗಿದೆ. ಇದರಿಂದ 9 ಮತ್ತು 10ನೇ ತರಗತಿಗಳಲ್ಲಿ ಶಿಕ್ಷಕರ ಕೊರತೆಯನ್ನು ತಾತ್ಕಾಲಿಕವಾಗಿ ನಿವಾರಿಸುವ ಉದ್ದೇಶ ಹೊಂದಲಾಗಿದೆ.
ಆದರೆ ಸರ್ಕಾರದ ಈ ನಿರ್ಧಾರಕ್ಕೆ ಪದವಿ ಪೂರ್ವ ಉಪನ್ಯಾಸಕರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ. ಉಪನ್ಯಾಸಕರ ಕರ್ತವ್ಯದ ವ್ಯಾಪ್ತಿಯನ್ನು ಏಕಪಕ್ಷೀಯವಾಗಿ ವಿಸ್ತರಿಸುವ ಬದಲು, ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಸಂಘ ಒತ್ತಾಯಿಸಿದೆ. ಅಲ್ಲದೆ, ಕರಡು ನಿಯಮವನ್ನು ಮರುಪರಿಶೀಲಿಸಿ ತಿದ್ದುಪಡಿಯನ್ನು ಹಿಂಪಡೆಯುವಂತೆ ಸರ್ಕಾರಕ್ಕೆ ಮನವಿ ಮಾಡಿದೆ.



