ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಗೋನಾಳ ಗ್ರಾಮದ ಸಮೀಪದ ಸಂಕ್ಲಿಪುರ ಕ್ರಾಸ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಅಕ್ಕ ಮತ್ತು ತಮ್ಮ ದಾರುಣವಾಗಿ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ಸವಣೂರ ಕಡೆಯಿಂದ ಲಕ್ಷ್ಮೇಶ್ವರದತ್ತ ಅತಿವೇಗವಾಗಿ ಬರುತ್ತಿದ್ದ ಐಶರ್/ಕ್ಯಾಂಟರ್ ವಾಹನವು ಸಂಕ್ಲಿಪುರ ಕ್ರಾಸ್‌ನಿಂದ ಸವಣೂರ ರಸ್ತೆಯತ್ತ ತೆರಳುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಕುಂದಗೋಳ ತಾಲೂಕಿನ ಕಡಪಟ್ಟಿಹಳ್ಳಾಳ ಗ್ರಾಮದ ಗೌರವ್ವ ಯಲ್ಲಪ್ಪ ಬಾರ್ಕಿ (43) ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಬೈಕ್ ಚಾಲಕ ಫಕೀರೇಶ ಬಾರ್ಕಿ (40) ಅವರನ್ನು ತಕ್ಷಣ ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.
ಬಳಿಕ ಹೆಚ್ಚಿನ ಚಿಕಿತ್ಸೆಗೆ ಗದಗ ಜಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದರು.
ಒಂದೇ ಕುಟುಂಬದ ಅಕ್ಕ-ತಮ್ಮ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವುದು ಕುಟುಂಬಸ್ಥರ ಆಕ್ರಂದನಕ್ಕೆ ಕಾರಣವಾಗಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಮೃತರ ತಂದೆ ನೀಡಿದ ದೂರಿನ ಮೇರೆಗೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ನಾಗರಾಜ ಗಡದ ತನಿಖೆ ಕೈಗೊಂಡಿದ್ದಾರೆ.



