ತಿರುವನಂತಪುರಂ: ಶಬರಿಮಲೆ ಯಾತ್ರೆ ಕೈಗೊಳ್ಳುವ ಲಕ್ಷಾಂತರ ಭಕ್ತರಿಗೆ ದೇವಸ್ಥಾನದ ಆಡಳಿತ ಮಂಡಳಿ ಸಿಹಿಸುದ್ದಿ ನೀಡಿದೆ. ಇನ್ನು ಮುಂದೆ ಭಕ್ತರು ಶಬರಿಮಲೆ ದೇವಸ್ಥಾನದಿಂದಲೇ ಅರವಣ, ಅಪ್ಪಂ ಸೇರಿದಂತೆ ವಿವಿಧ ಪ್ರಸಾದಗಳನ್ನು ಸ್ಪೀಡ್ ಪೋಸ್ಟ್ ಮೂಲಕ ತಮ್ಮ ಮನೆ ಬಾಗಿಲಿಗೆ ತರಿಸಿಕೊಳ್ಳಬಹುದು. ಮುಂಬರುವ ಮಂಡಲ-ಮಕರವಿಳಕ್ಕು ತೀರ್ಥಯಾತ್ರೆಯ ಸಂದರ್ಭದಲ್ಲಿ ಈ ವಿಶೇಷ ಸೌಲಭ್ಯ ಜಾರಿಗೆ ಬರಲಿದೆ.

ಸಾಮಾನ್ಯವಾಗಿ ಶಬರಿಮಲೆ ಯಾತ್ರೆಯ ವೇಳೆ ಭಕ್ತರು ಪ್ರಸಾದದ ಡಬ್ಬಿಗಳನ್ನು ತಮ್ಮೊಂದಿಗೆ ಹೊತ್ತುಕೊಂಡು ಹೋಗುವುದು ಕೆಲವೊಮ್ಮೆ ಕಷ್ಟವಾಗುತ್ತದೆ. ಈ ಸಮಸ್ಯೆಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ದೇವಸ್ಥಾನದ ಆಡಳಿತ ಮಂಡಳಿ ಹೊಸ ವ್ಯವಸ್ಥೆಯನ್ನು ರೂಪಿಸಿದೆ. ಇದರ ಮೂಲಕ ಯಾತ್ರಿಕರು ದೇವಸ್ಥಾನದಲ್ಲೇ ಪ್ರಸಾದ ಖರೀದಿಸಿ, ಅದನ್ನು ತಮ್ಮ ಮನೆಗೆ ಕಳುಹಿಸಲು ಬುಕ್ ಮಾಡಬಹುದು.
ದೇವಸ್ಥಾನದಲ್ಲೇ ಪಾರ್ಸೆಲ್ ಬುಕ್ಕಿಂಗ್ ವ್ಯವಸ್ಥೆ
ಭಕ್ತರ ಅನುಕೂಲಕ್ಕಾಗಿ ಶಬರಿಮಲೆ ದೇವಸ್ಥಾನದ ಸಂಕೀರ್ಣದಲ್ಲಿರುವ ತಿರುವಾಂಕೂರು ದೇವಸ್ವಂ ಮಂಡಳಿಯ (TDB) ಅರವಣ ಮತ್ತು ಅಪ್ಪಂ ವಿತರಣಾ ಕೌಂಟರ್ಗಳ ಪಕ್ಕದಲ್ಲೇ ವಿಶೇಷ ಪಾರ್ಸೆಲ್ ಬುಕಿಂಗ್ ಕೇಂದ್ರ ತೆರೆಯಲಾಗುತ್ತಿದೆ.
ಭಕ್ತರು ಪ್ರಸಾದ ಖರೀದಿಸಿದ ಬಳಿಕ ಅಲ್ಲಿಯೇ ತಮ್ಮ ವಿಳಾಸ ನೀಡಿ ಪಾರ್ಸೆಲ್ ಬುಕ್ ಮಾಡಬಹುದು. ಬಳಿಕ ಅಂಚೆ ಇಲಾಖೆಯ ಸ್ಪೀಡ್ ಪೋಸ್ಟ್ ಸೇವೆಯ ಮೂಲಕ ಪ್ರಸಾದವನ್ನು ಅವರ ಮನೆಗೆ ಕಳುಹಿಸಲಾಗುತ್ತದೆ.
ಯಾತ್ರೆ ಮುಗಿಸಿ ಮನೆಗೆ ಮರಳುವಷ್ಟರಲ್ಲಿ ಪ್ರಸಾದ ತಲುಪುವ ನಿರೀಕ್ಷೆ
ಈ ಸೌಲಭ್ಯದಿಂದಾಗಿ ಭಕ್ತರು ಪ್ರಸಾದದ ಡಬ್ಬಿಗಳನ್ನು ಪ್ರಯಾಣದ ಉದ್ದಕ್ಕೂ ಹೊತ್ತುಕೊಂಡು ಹೋಗುವ ಅಗತ್ಯ ಇರುವುದಿಲ್ಲ. ಯಾತ್ರೆ ಮುಗಿಸಿ ಮನೆಗೆ ಮರಳುವ ಹೊತ್ತಿಗೆ ಪ್ರಸಾದದ ಪಾರ್ಸೆಲ್ ಮನೆ ಬಾಗಿಲಿಗೆ ತಲುಪುವಂತೆ ವ್ಯವಸ್ಥೆ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಇದರಿಂದ ದೂರದ ಊರುಗಳಿಂದ ಬರುವ ಭಕ್ತರಿಗೆ ಹೆಚ್ಚಿನ ಅನುಕೂಲವಾಗಲಿದೆ.








