ಮಹಾರಾಷ್ಟ್ರ: ಸ್ವಾತಂತ್ರ್ಯ ಹೋರಾಟಗಾರ ಭಗವಾನ್ ಬಿರ್ಸಾ ಮುಂಡಾ ಅವರ 151ನೇ ಜನ್ಮದಿನ ಹಾಗೂ ಜನಜಾತೀಯ ಗೌರವ ದಿವಸ್ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಹಿಂದಿನ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೇಶದ ಬುಡಕಟ್ಟು ಸಮುದಾಯಗಳ ಅಭಿವೃದ್ಧಿ ಮತ್ತು ಅವರ ಸಮಸ್ಯೆಗಳ ಬಗ್ಗೆ ಹಿಂದಿನ ಸರ್ಕಾರಗಳು ಯಾವುದೇ ಕಾಳಜಿ ವಹಿಸಿರಲಿಲ್ಲ ಎಂದು ಆರೋಪಿಸಿದ್ದಾರೆ.

ಮಹಾರಾಷ್ಟ್ರದ ಗಢಚಿರೋಲಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳ ಬುಡಕಟ್ಟು ಸಮುದಾಯದ ಜನರೊಂದಿಗೆ ವರ್ಚುವಲ್ ಮೂಲಕ ಸಂವಾದ ನಡೆಸಿದ ಮೋದಿ, ತಮ್ಮ ಸರ್ಕಾರ ಜಾರಿಗೆ ತಂದಿರುವ ವಿವಿಧ ಕಲ್ಯಾಣ ಯೋಜನೆಗಳು ಮತ್ತು ಬುಡಕಟ್ಟು ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಮಾತನಾಡಿದರು.
ಬಿದಿರು ಕೃಷಿ ಕುರಿತು ಮೋದಿ ಮಹತ್ವದ ಮಾತು
ಸಂವಾದದ ವೇಳೆ ಗುಜರಾತ್ನ ಭರೂಚ್ ಜಿಲ್ಲೆಯ ವಜೀರ್ ಎಂಬುವವರೊಂದಿಗೆ ಪ್ರಧಾನಿ ಮೋದಿ ಮಾತನಾಡಿದರು. ಈ ಸಂದರ್ಭದಲ್ಲಿ ಬಿದಿರು ಕೃಷಿ ಹಾಗೂ ಬುಡಕಟ್ಟು ಸಮುದಾಯಗಳಿಗಾಗಿ ಜಾರಿಗೆ ತಂದಿರುವ ಪಿಎಂ-ಜನ್ಮನ್ ಯೋಜನೆಯ ಪ್ರಯೋಜನಗಳ ಕುರಿತು ಚರ್ಚಿಸಿದರು.
ಬ್ರಿಟಿಷರ ಆಡಳಿತದ ಸಂದರ್ಭದಲ್ಲಿ ಬಿದಿರನ್ನು ಮರ ಎಂದು ವರ್ಗೀಕರಿಸಲಾಗಿತ್ತು. ಇದರಿಂದ ಬಿದಿರು ಕಡಿಯಲು ಕಾನೂನು ನಿರ್ಬಂಧಗಳಿದ್ದವು. ನಿಯಮ ಉಲ್ಲಂಘಿಸಿ ಬಿದಿರು ಕಡಿಯುವವರಿಗೆ ಜೈಲು ಶಿಕ್ಷೆ ವಿಧಿಸುವ ವ್ಯವಸ್ಥೆಯೂ ಇತ್ತು ಎಂದು ಮೋದಿ ಸ್ಮರಿಸಿದರು.
ಹಿಂದಿನ ಸರ್ಕಾರಗಳ ವಿರುದ್ಧ ಮೋದಿ ಕಿಡಿ
ಬ್ರಿಟಿಷರ ಕಾಲದಲ್ಲಿ ಜಾರಿಯಲ್ಲಿದ್ದ ಇಂತಹ ಕಾನೂನನ್ನು ಸ್ವಾತಂತ್ರ್ಯ ಬಂದ ತಕ್ಷಣವೇ ರದ್ದುಗೊಳಿಸಬೇಕಿತ್ತು. ಆದರೆ ದುರದೃಷ್ಟವಶಾತ್ ಹಿಂದಿನ ಸರ್ಕಾರಗಳಿಗೆ ಬುಡಕಟ್ಟು ಸಮುದಾಯಗಳ ಸಮಸ್ಯೆಗಳ ಬಗ್ಗೆ ಅರಿವಿರಲಿಲ್ಲ. ಅವರ ಅಭಿವೃದ್ಧಿಯ ಬಗ್ಗೆಯೂ ಕಾಳಜಿ ಇರಲಿಲ್ಲ ಎಂದು ಪ್ರಧಾನಿ ಮೋದಿ ಟೀಕಿಸಿದರು.
ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಳೆಯ ಕಾನೂನನ್ನು ರದ್ದುಗೊಳಿಸಿ, ಬುಡಕಟ್ಟು ಸಮುದಾಯಗಳಿಗೆ ಬಿದಿರಿನ ಮೇಲಿನ ಹಕ್ಕುಗಳನ್ನು ನೀಡಲಾಗಿದೆ ಎಂದು ತಿಳಿಸಿದರು. ಬುಡಕಟ್ಟು ಜನರ ಜೀವನಮಟ್ಟ ಸುಧಾರಣೆ, ಆರ್ಥಿಕ ಸಬಲೀಕರಣ ಮತ್ತು ಅವರ ಹಕ್ಕುಗಳ ರಕ್ಷಣೆಗೆ ತಮ್ಮ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದೂ ಮೋದಿ ಹೇಳಿದರು.









