ವಾಷಿಂಗ್ಟನ್: ಅಮೆರಿಕದ ಮಿಯಾಮಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Miami International Airport) ಎರಡು ಬೋಯಿಂಗ್ ವಿಮಾನಗಳು ಡಿಕ್ಕಿ ಹೊಡೆದುಕೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ. ಈ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದು, ವಿಮಾನ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಪನಾಮ ನಗರದಿಂದ 166 ಪ್ರಯಾಣಿಕರು ಹಾಗೂ ಆರು ಸಿಬ್ಬಂದಿಯನ್ನು ಹೊತ್ತು ತರುತ್ತಿದ್ದ ಕೋಪಾ ಏರ್ಲೈನ್ಸ್ನ ಬೋಯಿಂಗ್ 737 ವಿಮಾನವು ಯುಪಿಎಸ್ (UPS) ಸಂಸ್ಥೆಯ ಬೋಯಿಂಗ್ 767 ವಿಮಾನಕ್ಕೆ ಡಿಕ್ಕಿ ಹೊಡೆದಿದೆ. ಕೋಪಾ ವಿಮಾನದ ರೆಕ್ಕೆಯ ತುದಿಯು ಯುಪಿಎಸ್ ವಿಮಾನದ ಮುಂಭಾಗಕ್ಕೆ ಅಪ್ಪಳಿಸಿದೆ ಎಂದು ವರದಿಯಾಗಿದೆ.
ವಾಯು ಸಂಚಾರ ನಿಯಂತ್ರಕರ ಸೂಚನೆ ಬೆನ್ನಲ್ಲೇ ಅವಘಡ
ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ಪ್ರಕಾರ, ಕೋಪಾ ಏರ್ಲೈನ್ಸ್ ವಿಮಾನಕ್ಕೆ ದಾರಿ ಮಾಡಿಕೊಡುವಂತೆ ವಾಯು ಸಂಚಾರ ನಿಯಂತ್ರಕರು ಯುಪಿಎಸ್ ವಿಮಾನದ ಸಿಬ್ಬಂದಿಗೆ ಸೂಚನೆ ನೀಡಿದ್ದರು. ಈ ಸಂದರ್ಭದಲ್ಲಿ ಎರಡು ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯ ಕುರಿತು ಎಫ್ಎಎ ತನಿಖೆ ಆರಂಭಿಸಿದೆ.
ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ಎಂದ ಕೋಪಾ ಏರ್ಲೈನ್ಸ್
ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೋಪಾ ಏರ್ಲೈನ್ಸ್, ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಅವಘಡದಿಂದ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿದೆ.
ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯೇ ತಮ್ಮ ಮೊದಲ ಆದ್ಯತೆಯಾಗಿದ್ದು, ಅಧಿಕಾರಿಗಳು ನಡೆಸುತ್ತಿರುವ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಸಂಸ್ಥೆ ತಿಳಿಸಿದೆ.
ಅಮೆರಿಕದಲ್ಲಿ ವಿಮಾನ ಹಾರಾಟದ ಅವ್ಯವಸ್ಥೆ ಬೆನ್ನಲ್ಲೇ ಮತ್ತೊಂದು ಘಟನೆ
ಅಮೆರಿಕದಾದ್ಯಂತ ವಿಮಾನ ಹಾರಾಟ ಸ್ಥಗಿತಗೊಂಡು ವ್ಯಾಪಕ ಪ್ರಮಾಣದಲ್ಲಿ ವಿಮಾನಗಳ ರದ್ದತಿ ಹಾಗೂ ಪ್ರಯಾಣಿಕರಿಗೆ ತೊಂದರೆ ಉಂಟಾದ ಒಂದು ದಿನದ ಬಳಿಕ ಮಿಯಾಮಿ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಈಗಾಗಲೇ ವಿಮಾನ ಪ್ರಯಾಣದ ವ್ಯತ್ಯಯದಿಂದ ಸಂಕಷ್ಟ ಎದುರಿಸುತ್ತಿದ್ದ ಪ್ರಯಾಣಿಕರಿಗೆ ಈ ಅವಘಡ ಮತ್ತಷ್ಟು ಆತಂಕ ಮೂಡಿಸಿದೆ.









