ತುಮಕೂರು: ಪತಿ-ಪತ್ನಿ ನಡುವಿನ ಕೌಟುಂಬಿಕ ಕಲಹಕ್ಕೆ 16 ವರ್ಷದ ಬಾಲಕ ಬಲಿಯಾಗಿರುವ ಆಘಾತಕಾರಿ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಚೌಡನಾಯಕನಪಾಳ್ಯದಲ್ಲಿ ನಡೆದಿದೆ. ಕ್ಷುಲ್ಲಕ ವಿಚಾರಕ್ಕೆ ನಡೆದ ಗಲಾಟೆಯ ವೇಳೆ ತಂದೆಯೇ ಸ್ವಂತ ಮಗನನ್ನು ಹಾರೆಯಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿದ್ದಾನೆ. ಸುನೀಲ್ (16) ಕೊಲೆಯಾದ ಬಾಲಕನಾಗಿದ್ದು, ಆರೋಪಿ ತಂದೆ ನಂಜಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

ಪತಿ-ಪತ್ನಿ ನಡುವೆ ಮತ್ತೆ ಶುರುವಾದ ಜಗಳ!
ನಂಜಪ್ಪ ಮತ್ತು ರಂಜಿತಾ ದಂಪತಿ ಸುಮಾರು 20 ವರ್ಷಗಳ ಹಿಂದೆ ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಕಳೆದ ಕೆಲವು ತಿಂಗಳಿಂದ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಸುಮಾರು ಆರು ತಿಂಗಳ ಹಿಂದೆ ನಡೆದ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಪತ್ನಿ ರಂಜಿತಾ ನೀಡಿದ್ದ ದೂರಿನ ಆಧಾರದ ಮೇಲೆ ನಂಜಪ್ಪ ಜೈಲಿಗೂ ಹೋಗಿದ್ದ. ಬಳಿಕ ಜೈಲಿನಿಂದ ಬಿಡುಗಡೆಯಾದ ನಂತರ ಪತ್ನಿಯೊಂದಿಗೆ ರಾಜಿ ಮಾಡಿಕೊಂಡು ಮತ್ತೆ ಸಂಸಾರ ಆರಂಭಿಸಿದ್ದ ಎನ್ನಲಾಗಿದೆ.
ಆದರೆ ಭಾನುವಾರ ಮುಂಜಾನೆ ಸುಮಾರು 6 ಗಂಟೆಯ ವೇಳೆಗೆ ದಂಪತಿ ನಡುವೆ ಮತ್ತೆ ಜಗಳ ಆರಂಭವಾಗಿದೆ. ಈ ವೇಳೆ ನಂಜಪ್ಪ ಪತ್ನಿ ರಂಜಿತಾಳನ್ನು ಮನೆಯಿಂದ ಹೊರಗೆ ಹಾಕಿದ್ದಾನೆ.
ಟ್ಯೂಷನ್ಗೆ ಹೊರಟಿದ್ದ ಮಗನ ಮೇಲೆ ಹಾರೆಯಿಂದ ದಾಳಿ!
ಈ ಗಲಾಟೆಯ ನಡುವೆ ಬೆಳಿಗ್ಗೆ ಟ್ಯೂಷನ್ಗೆ ತೆರಳಲು ಸಿದ್ಧವಾಗಿದ್ದ 16 ವರ್ಷದ ಸುನೀಲ್ ಮನೆಯ ಬಾಗಿಲು ತೆರೆದಿದ್ದಾನೆ. ಇದೇ ಸಂದರ್ಭದಲ್ಲಿ ಕೋಪಗೊಂಡಿದ್ದ ತಂದೆ ನಂಜಪ್ಪ, ಮಗನ ಮೇಲೆ ಹಾರೆಯಿಂದ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡ ಸುನೀಲ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮಗನ ಮೇಲೆ ತಂದೆಯೇ ಹಲ್ಲೆ ನಡೆಸಿ ಕೊಲೆ ಮಾಡುತ್ತಿರುವುದನ್ನು ಮನೆಯ ಕಿಟಕಿಯಿಂದ ನೋಡಿದ ತಾಯಿ ರಂಜಿತಾ ಆಘಾತಕ್ಕೊಳಗಾಗಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳದಲ್ಲೇ ಕುಳಿತಿದ್ದ ಆರೋಪಿ ತಂದೆ ಬಂಧನ
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಕುಣಿಗಲ್ ಪೊಲೀಸರು, ಮಗನನ್ನು ಕೊಲೆ ಮಾಡಿದ ಬಳಿಕ ಮನೆಯಲ್ಲೇ ಕುಳಿತಿದ್ದ ಆರೋಪಿ ನಂಜಪ್ಪನನ್ನು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇನ್ನು ದಂಪತಿಯ ಮತ್ತೊಬ್ಬ ಮಗ ಅಜ್ಜಿಯ ಮನೆಯಲ್ಲಿ ವಾಸವಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಕೌಟುಂಬಿಕ ಕಲಹಕ್ಕೆ 16 ವರ್ಷದ ಬಾಲಕ ಪ್ರಾಣ ಕಳೆದುಕೊಂಡಿರುವ ಘಟನೆ ಸ್ಥಳೀಯರಲ್ಲಿ ತೀವ್ರ ಆಘಾತ ಮೂಡಿಸಿದೆ.









