ಟೋಕಿಯೊ: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಜಪಾನ್ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಭಾನುವಾರ ನಡೆದ ಕುಮಾಮೊಟೊ ಜಪಾನ್ ಮಾಸ್ಟರ್ಸ್ 2026 ಸೂಪರ್ 500 ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಜಪಾನ್ನ ಕೋಕಿ ವಟನಾಬೆ ಅವರನ್ನು ಮಣಿಸಿದ ಲಕ್ಷ್ಯ ಸೇನ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಈ ಮೂಲಕ ಜಪಾನ್ ಮಾಸ್ಟರ್ಸ್ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮೂರು ಸೆಟ್ಗಳ ರೋಚಕ ಹಣಾಹಣಿಯಲ್ಲಿ ಲಕ್ಷ್ಯ ಸೇನ್ ಆರಂಭಿಕ ಸೆಟ್ನಲ್ಲಿ ಸೋಲು ಕಂಡರೂ, ಅದ್ಭುತವಾಗಿ ಕಮ್ಬ್ಯಾಕ್ ಮಾಡಿದರು. ಮೊದಲ ಸೆಟ್ ಅನ್ನು 13-21ರಿಂದ ಕಳೆದುಕೊಂಡ ಸೇನ್, ಎರಡನೇ ಸೆಟ್ನಲ್ಲಿ 21-18 ಅಂತರದಿಂದ ಗೆಲುವು ಸಾಧಿಸಿ ಪಂದ್ಯವನ್ನು ಸಮಬಲಗೊಳಿಸಿದರು. ನಿರ್ಣಾಯಕ ಮೂರನೇ ಸೆಟ್ನಲ್ಲಿ ಎದುರಾಳಿಗೆ ಯಾವುದೇ ಅವಕಾಶ ನೀಡದೆ 21-14 ಅಂತರದಿಂದ ಜಯಗಳಿಸಿದರು.
ಸತತ ಫೈನಲ್ಗಳ ಮೂಲಕ ಮತ್ತೊಂದು ಸಾಧನೆ
ಹೈಲೋ ಓಪನ್ನಲ್ಲಿ ಪ್ರಶಸ್ತಿ ಗೆದ್ದ ಬಳಿಕ ಉತ್ತಮ ಲಯದಲ್ಲಿದ್ದ ವಿಶ್ವದ 13ನೇ ಶ್ರೇಯಾಂಕಿತ ಲಕ್ಷ್ಯ ಸೇನ್, ಜಪಾನ್ ಮಾಸ್ಟರ್ಸ್ನಲ್ಲೂ ಅದೇ ಪ್ರದರ್ಶನ ಮುಂದುವರಿಸಿದ್ದಾರೆ. ಸತತ ಟೂರ್ನಿಗಳಲ್ಲಿ ಫೈನಲ್ ಪ್ರವೇಶಿಸಿ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ವಿಶ್ವ ರ್ಯಾಂಕಿಂಗ್ನಲ್ಲೂ ಏರಿಕೆ ನಿರೀಕ್ಷೆ
ಜಪಾನ್ ಮಾಸ್ಟರ್ಸ್ನಲ್ಲಿ ಗಳಿಸಿರುವ 9,200 ಶ್ರೇಯಾಂಕದ ಅಂಕಗಳು ಲಕ್ಷ್ಯ ಸೇನ್ ಅವರ ಮುಂದಿನ ಗುರಿಗಳಿಗೆ ಮಹತ್ವದ ಉತ್ತೇಜನ ನೀಡಲಿವೆ. ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಶ್ರೇಯಾಂಕದಲ್ಲಿ 12ನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಏರುವ ಅವರ ಪ್ರಯತ್ನಕ್ಕೆ ಈ ಅಂಕಗಳು ನೆರವಾಗುವ ನಿರೀಕ್ಷೆಯಿದೆ.
ಅಲ್ಲದೆ, ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಫೈನಲ್ಸ್ಗೆ ಅರ್ಹತೆ ಪಡೆಯುವ ಹಾದಿಯಲ್ಲೂ ಈ ಗೆಲುವು ಮಹತ್ವದ್ದಾಗಿದೆ. ಜಪಾನ್ ನೆಲದಲ್ಲಿ ಐತಿಹಾಸಿಕ ಪ್ರಶಸ್ತಿ ಗೆಲ್ಲುವ ಮೂಲಕ ಲಕ್ಷ್ಯ ಸೇನ್ ಭಾರತೀಯ ಬ್ಯಾಡ್ಮಿಂಟನ್ಗೆ ಮತ್ತೊಂದು ಹೆಮ್ಮೆಯ ಕ್ಷಣವನ್ನು ನೀಡಿದ್ದಾರೆ.









