ವಿಜಯಪುರ: ಸಿದ್ಧಸಿರಿ ಬ್ಯಾಂಕ್ಗೆ ಜಾರಿ ನಿರ್ದೇಶನಾಲಯ (ED) ಹಾಗೂ ಆದಾಯ ತೆರಿಗೆ ಇಲಾಖೆ (IT) ದಾಳಿ ನಡೆಸಲಿದೆ ಎಂಬ ವದಂತಿಗಳ ನಡುವೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟನೆ ನೀಡಿದ್ದಾರೆ. ಬ್ಯಾಂಕ್ಗೆ ಯಾವುದೇ ಅಕ್ರಮದ ನೋಟಿಸ್ ಬಂದಿಲ್ಲ. ಕೇಂದ್ರ ಸಹಕಾರ ಇಲಾಖೆ ಕೇಳಿದ್ದ ಮಾಹಿತಿಗೆ ಈಗಾಗಲೇ ಸಮರ್ಪಕ ಉತ್ತರ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ಈ ಹಿಂದೆ ಸಿದ್ಧಸಿರಿ ಸಂಸ್ಥೆ ರಾಜ್ಯ ಸರ್ಕಾರದ ಸಹಕಾರ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಇದೀಗ ಅದನ್ನು ಕೇಂದ್ರ ಸಹಕಾರ ಇಲಾಖೆಯ ಅಡಿಯಲ್ಲಿ ಸಿದ್ಧಸಿರಿ ಮಲ್ಟಿಸ್ಟೇಟ್ ಮಲ್ಟಿಪರ್ಪಸ್ ಬ್ಯಾಂಕ್ ಆಗಿ ನೋಂದಣಿ ಮಾಡಿಸಲಾಗಿದೆ ಎಂದು ತಿಳಿಸಿದರು.
ಕಳೆದ ಆಗಸ್ಟ್ ತಿಂಗಳಲ್ಲಿ ಕೇಂದ್ರ ಇಲಾಖೆಯಿಂದ ಕೆಲವು ಮಾಹಿತಿಗಳನ್ನು ಕೇಳಲಾಗಿತ್ತು. ಅದಕ್ಕೆ ಸೆಪ್ಟೆಂಬರ್ ತಿಂಗಳಲ್ಲೇ ಉತ್ತರ ನೀಡಿದ್ದೇವೆ. ಇದು ಯಾವುದೇ ಆರೋಪ ಅಥವಾ ಕ್ರಮಕ್ಕೆ ಸಂಬಂಧಿಸಿದ ನೋಟಿಸ್ ಅಲ್ಲ. ಕೇವಲ ಮಾಹಿತಿ ಹಾಗೂ ಅಗತ್ಯ ಸ್ಪಷ್ಟನೆಗಳನ್ನು ಕೇಳಲಾಗಿತ್ತು. ಅದಕ್ಕೆ ಸಮರ್ಪಕವಾಗಿ ಪ್ರತಿಕ್ರಿಯಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.
ನೋಟಿಸ್ ವೈರಲ್ ಮಾಡಿ ಗೊಂದಲ ಸೃಷ್ಟಿಸಲಾಗಿದೆ: ಯತ್ನಾಳ್
ಆಗಸ್ಟ್ನಲ್ಲಿ ನೀಡಿದ್ದ ನೋಟಿಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಹಲವು ರೀತಿಯ ಚರ್ಚೆಗಳು ನಡೆದಿವೆ. ಕೇಂದ್ರ ಮತ್ತು ರಾಜ್ಯ ಸಹಕಾರ ಕಾಯ್ದೆಗಳು ವಿಭಿನ್ನವಾಗಿರುವುದರಿಂದ, ಕೇಂದ್ರ ಸಹಕಾರ ಇಲಾಖೆ ಕೆಲವು ಅಗತ್ಯ ಮಾಹಿತಿಗಳನ್ನು ಕೇಳುವುದು ಸಾಮಾನ್ಯ ಪ್ರಕ್ರಿಯೆ. ಆದರೆ ಇದನ್ನೇ ಅವ್ಯವಹಾರ ನಡೆದಿದೆ ಎಂಬಂತೆ ಬಿಂಬಿಸಿ ಗೊಂದಲ ಸೃಷ್ಟಿಸಲಾಗಿದೆ ಎಂದು ಯತ್ನಾಳ್ ಆರೋಪಿಸಿದರು. ಇದರ ಹಿಂದೆ ತಮ್ಮ ವಿರುದ್ಧ ಷಡ್ಯಂತ್ರ ನಡೆಸುವ ಪ್ರಯತ್ನವಿದೆ ಎಂದು ಅವರು ದೂರಿದರು.
ಸಿದ್ಧಸಿರಿ ಸಕ್ಕರೆ ಕಾರ್ಖಾನೆಯ ಮಾಲೀಕ ನಾನಲ್ಲ!
ಸಿದ್ಧಸಿರಿ ಸಕ್ಕರೆ ಕಾರ್ಖಾನೆಯ ಹಣ ದುರುಪಯೋಗ ಹಾಗೂ ಬೇನಾಮಿ ಆಸ್ತಿ ಆರೋಪಗಳ ಬಗ್ಗೆಯೂ ಯತ್ನಾಳ್ ಪ್ರತಿಕ್ರಿಯಿಸಿದರು. ಸಕ್ಕರೆ ಕಾರ್ಖಾನೆಯ ಮಾಲೀಕ ತಾನಲ್ಲ, ಸಿದ್ಧಸಿರಿ ಸಹಕಾರಿ ಬ್ಯಾಂಕ್ ಸಂಸ್ಥೆಯೇ ಕಾರ್ಖಾನೆಯ ಮಾಲೀಕ ಎಂದು ಹೇಳಿದರು.
ರಾಮನಗೌಡ ಬಸನಗೌಡ ಪಾಟೀಲ್ ಅವರು ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ಆದರೆ ಸಂಸ್ಥೆಯ ಆಸ್ತಿಗೂ ವೈಯಕ್ತಿಕ ಆಸ್ತಿಗೂ ಸಂಬಂಧವಿಲ್ಲ. ತಮ್ಮ ಕುಟುಂಬದವರ ಹೆಸರಿನಲ್ಲಿ ಯಾವುದೇ ಬೇನಾಮಿ ಆಸ್ತಿ ಅಥವಾ ಸಾಲ ಪಡೆದಿಲ್ಲ ಎಂದು ಆರೋಪಗಳನ್ನು ತಳ್ಳಿಹಾಕಿದರು.
ಖಾಸಗಿ ಆಸ್ತಿ ಸಾಬೀತುಪಡಿಸಿದರೆ 1 ಕೋಟಿ ರೂ. ಬಹುಮಾನ!
ತಮ್ಮ ವಿರುದ್ಧ ಮಾಡಿರುವ ಬೇನಾಮಿ ಆಸ್ತಿ ಆರೋಪಗಳಿಗೆ ಸವಾಲು ಹಾಕಿದ ಯತ್ನಾಳ್, ತಮ್ಮ ಕುಟುಂಬದವರ ಹೆಸರಿನಲ್ಲಿ ಒಂದೇ ಒಂದು ಗುಂಟೆ ಬೇನಾಮಿ ಆಸ್ತಿ ಅಥವಾ ಸಾಲವಿದೆ ಎಂಬುದನ್ನು ಸಾಬೀತುಪಡಿಸಲಿ ಎಂದು ಹೇಳಿದರು.
ತಮ್ಮ ಹೆಸರಿನಲ್ಲಿ ಅಥವಾ ಕುಟುಂಬದವರ ಹೆಸರಿನಲ್ಲಿ ಖಾಸಗಿ ಬೇನಾಮಿ ಆಸ್ತಿ ಇದೆ ಎಂಬುದನ್ನು ಯಾರಾದರೂ ದಾಖಲೆಗಳ ಸಮೇತ ಸಾಬೀತುಪಡಿಸಿದರೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಬಹಿರಂಗ ಸವಾಲು ಹಾಕಿದರು.
ಈ ಮೂಲಕ ಸಿದ್ಧಸಿರಿ ಬ್ಯಾಂಕ್ ಹಾಗೂ ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದ ಆರೋಪಗಳ ಕುರಿತು ತಮ್ಮ ನಿಲುವನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟಪಡಿಸಿದ್ದಾರೆ.







