ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಯೋಗವು ಕೇವಲ ವ್ಯಾಯಾಮವಲ್ಲ, ಅದು ಬದುಕಿನ ಪರಿವರ್ತನೆಯ ಮಾರ್ಗ ಎಂಬುದನ್ನು ತಮ್ಮ ಜೀವನದಲ್ಲೇ ಸಾಬೀತುಪಡಿಸಿರುವವರು ಪಟ್ಟಣದ ಯೋಗ ಸಾಧಕಿ ರೂಪಾ ಕಲ್ಮೇಶ್ವರ ಸಂತಿ. ಆರೋಗ್ಯ ಸಮಸ್ಯೆಗಳನ್ನು ಯೋಗಾಭ್ಯಾಸದ ಮೂಲಕ ದೂರ ಮಾಡಿಕೊಂಡ ಅವರು ಇಂದು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡ ಯೋಗ ಸಾಧಕಿಯಾಗಿ ಹೊರಹೊಮ್ಮಿದ್ದಾರೆ.
ಬಾಲ್ಯದಿಂದಲೇ ಶಿಕ್ಷಣ ಮತ್ತು ಯೋಗದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ರೂಪಾ ಸಂತಿ ಅವರು ಬಿ.ಎಡ್ ಪದವೀಧರೆ. 2019ರಲ್ಲಿ ಲಕ್ಷ್ಮೇಶ್ವರದಲ್ಲಿ ನಡೆದ ಉಚಿತ ಯೋಗ ತರಬೇತಿ ಶಿಬಿರದಲ್ಲಿ ಭಾಗವಹಿಸುವ ಮೂಲಕ ಅವರ ಯೋಗಯಾನ ಆರಂಭವಾಯಿತು. ಯೋಗಾಚಾರ್ಯ ಭವಹರಲಾಲ್ ಆರ್ಯ ಅವರ ಮಾರ್ಗದರ್ಶನದಲ್ಲಿ ಆರಂಭವಾದ ಈ ಪಯಣ ಜೀವನದಲ್ಲಿ ಹೊಸ ತಿರುವು ನೀಡಿತು.
ನಿತ್ಯ ಯೋಗಾಭ್ಯಾಸದಿಂದ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಂಡ ಅವರು, ಯೋಗದ ಬಗ್ಗೆ ಇನ್ನಷ್ಟು ಆಳವಾದ ಜ್ಞಾನ ಸಂಪಾದಿಸುವ ಸಂಕಲ್ಪದೊಂದಿಗೆ ಯೋಗ ಶಿಕ್ಷಣದತ್ತ ಹೆಜ್ಜೆ ಇಟ್ಟರು. ಗುರುಗಳಾದ ಡಾ. ಎಸ್.ಎಸ್. ಹಿರೇಮಠ ಅವರ ಮಾರ್ಗದರ್ಶನದಲ್ಲಿ ಸರ್ಟಿಫಿಕೇಟ್ ಇನ್ ಯೋಗ ಸೈನ್ಸ್ (CYS) ಹಾಗೂ ಬ್ಯಾಚುಲರ್ ಆಫ್ ನ್ಯಾಚುರೋಪತಿ ಅಂಡ್ ಯೋಗಿಕ್ ಸೈನ್ಸ್ ಪದವಿ ಪಡೆದರು. ಬಳಿಕ ಯೋಗಾಚಾರ್ಯ ಕೆ.ಎಸ್. ಪಲ್ಲೇದ ಅವರ ಮಾರ್ಗದರ್ಶನದಲ್ಲಿ ಯೋಗದಲ್ಲಿ ಪಿ.ಜಿ. ಡಿಪ್ಲೊಮಾ ಪೂರ್ಣಗೊಳಿಸಿದರು.
ಅವರ ಪರಿಶ್ರಮ, ಶಿಸ್ತು, ನಿರಂತರ ಅಭ್ಯಾಸ ಮತ್ತು ಯೋಗದ ಮೇಲಿನ ಅಪಾರ ಆಸಕ್ತಿಗೆ ಪ್ರತಿಫಲವಾಗಿ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಗೋಲ್ಡ್ ಮೆಡಲ್ ಲಭಿಸಿದೆ. ಇದು ಅವರ ಯೋಗ ಸಾಧನೆಗೆ ಸಂದ ಮಹತ್ವದ ಗೌರವವಾಗಿದೆ.
ಇಂದು ರೂಪಾ ಸಂತಿ ಅವರು ಲಕ್ಷ್ಮೇಶ್ವರ ಸೇರಿದಂತೆ ವಿವಿಧೆಡೆ ಉಚಿತ ಯೋಗ ತರಬೇತಿ ಶಿಬಿರಗಳನ್ನು ನಡೆಸುತ್ತಿದ್ದು, ಆರೋಗ್ಯಕರ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಯೋಗದ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಮೂಲಕ ಅನೇಕರ ಜೀವನದಲ್ಲಿ ಆರೋಗ್ಯದ ಬೆಳಕು ಮೂಡಿಸುತ್ತಿದ್ದಾರೆ.
ರೂಪಾ ಸಂತಿ ಅವರ ಪ್ರಕಾರ, ಆಸನಗಳಿಂದ ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ. ಪ್ರಾಣಾಯಾಮದಿಂದ ಉಸಿರಾಟದ ವ್ಯವಸ್ಥೆ ಸುಧಾರಿಸುತ್ತದೆ. ಧ್ಯಾನವು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ನೆಮ್ಮದಿಯ ಬದುಕಿಗೆ ದಾರಿ ಮಾಡಿಕೊಡುತ್ತದೆ. ಯೋಗವು ಯಾವುದೇ ಜಾತಿ, ಧರ್ಮ ಅಥವಾ ವರ್ಗಕ್ಕೆ ಸೀಮಿತವಾಗಿಲ್ಲ; ಅದು ವಿಶ್ವದ ಜನರಿಗೆ ಆರೋಗ್ಯಕರ ಜೀವನ ಕ್ರಮವಾಗಿದೆ ಎಂದು ಅವರು ಅಭಿಪ್ರಾಯಪಡುತ್ತಾರೆ.
“ಯೋಗ ಕೇವಲ ಜೂನ್ 21ರ ಯೋಗ ದಿನಕ್ಕೆ ಸೀಮಿತವಾಗಬಾರದು. ಅದು ಪ್ರತಿಯೊಬ್ಬರ ನಿತ್ಯ ಜೀವನದ ಭಾಗವಾಗಬೇಕು. ಯೋಗದಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಎರಡನ್ನೂ ಕಾಪಾಡಿಕೊಳ್ಳಬಹುದು.”
– ರೂಪಾ ಕಲ್ಮೇಶ್ವರ ಸಂತಿ, ಯೋಗ ಸಾಧಕಿ



