ವಿಜಯಸಾಕ್ಷಿ ಸುದ್ದಿ, ಗದಗ; ಗೃಹಲಕ್ಷ್ಮಿ ಯೋಜನೆಯ ಪರಿಷ್ಕರಣೆ ಹೆಸರಿನಲ್ಲಿ ರಾಜ್ಯ ಸರ್ಕಾರ ಮಹಿಳೆಯರಿಗೆ ಅನ್ಯಾಯ ಮಾಡುತ್ತಿದ್ದು, ಯೋಜನೆಯಲ್ಲಿನ ಗೊಂದಲಗಳು ರಾಜ್ಯದ ಹದಗೆಟ್ಟ ಆರ್ಥಿಕ ಪರಿಸ್ಥಿತಿಗೆ ಸಾಕ್ಷಿಯಾಗಿವೆ ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆಯಲ್ಲಿ ಅನರ್ಹರು ಇದ್ದಾರೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಯೋಜನೆಯನ್ನು ಜಾರಿಗೆ ತಂದಿದ್ದು ಇದೇ ಸರ್ಕಾರ. ಕಳೆದ ಮೂರು ವರ್ಷಗಳಿಂದ ಅನರ್ಹರಿಗೆ ಹಣ ಹೋಗಿದ್ದರೆ ಅದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ರಾಜ್ಯದ ಬೊಕ್ಕಸವನ್ನು ತಾವೇ ಹಾಳು ಮಾಡಿ ಈಗ ಆರ್ಥಿಕ ಪರಿಸ್ಥಿತಿಯ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ. ಗೃಹಲಕ್ಷ್ಮಿ ಯೋಜನೆಗೆ ಮೀಸಲಿಟ್ಟಿರುವ 5 ಸಾವಿರ ಕೋಟಿ ರೂ. ಕುರಿತು ಸರ್ಕಾರ ಇದುವರೆಗೂ ಸ್ಪಷ್ಟ ಲೆಕ್ಕ ನೀಡಿಲ್ಲ. ವಿಧಾನಸಭೆಯಲ್ಲಿ ಶಾಸಕರು ಪ್ರಶ್ನೆ ಕೇಳಿದರೂ ಉತ್ತರಿಸುವ ಧೈರ್ಯ ಸರ್ಕಾರಕ್ಕಿಲ್ಲ ಎಂದು ಆರೋಪಿಸಿದರು.
ವಿಧಾನಸಭೆಯಲ್ಲಿ ನೂರಾರು ಸಿಬ್ಬಂದಿಯನ್ನು ದಿಢೀರ್ ಕಡಿತಗೊಳಿಸಿರುವ ಕ್ರಮದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ ಅವರು, ಸಿಬ್ಬಂದಿಗೆ ಕೆಲಸವಿರಲಿಲ್ಲ ಎನ್ನುವುದಾದರೆ ಇಷ್ಟು ವರ್ಷಗಳ ಕಾಲ ಅವರು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು. ಇದು ಸಾರ್ವಜನಿಕರ ತೆರಿಗೆ ಹಣದ ಲೂಟಿ ಅಲ್ಲದೇ ಮತ್ತೇನು ಎಂದು ಟೀಕಿಸಿದರು.
ರಾಜ್ಯದ ಹಲವು ಸಚಿವರು ತಮ್ಮ ಖಾತೆಗಳ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಒಬ್ಬ ಸಚಿವರು ನೀರಾವರಿ ಖಾತೆ ಬೇಡ ಎನ್ನುತ್ತಾರೆ, ಮತ್ತೊಬ್ಬರು ಬೇರೆ ಖಾತೆ ಕೇಳುತ್ತಿದ್ದಾರೆ. ಕೇವಲ 12 ಸಚಿವರನ್ನು ಇಟ್ಟುಕೊಂಡೇ ಇಷ್ಟೊಂದು ಸಮಸ್ಯೆಗಳು ಸೃಷ್ಟಿಯಾಗಿವೆ. ಉಳಿದ ಖಾತೆಗಳ ಹಂಚಿಕೆ ಬಳಿಕ ಇನ್ನಷ್ಟು ಗೊಂದಲಗಳು ಉಂಟಾಗಲಿವೆ ಎಂದು ಲೇವಡಿ ಮಾಡಿದರು.
ಪ್ರಿಯಾಂಕ್ ಖರ್ಗೆಗೆ ತಿರುಗೇಟು
ಆರ್‌ಎಸ್‌ಎಸ್ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬರೆದ ಪತ್ರದ ಬಗ್ಗೆ ಪ್ರತಿಕ್ರಿಯಿಸಿದ ಸಿ.ಸಿ. ಪಾಟೀಲ, ಆರ್‌ಎಸ್‌ಎಸ್ ಇಂತಹ ನೂರಾರು ಗೃಹ ಸಚಿವರನ್ನು ನೋಡಿದೆ. ಸ್ವತಃ ಜವಾಹರಲಾಲ್ ನೆಹರೂ ಅವರೇ ಆರ್‌ಎಸ್‌ಎಸ್ ವೇಷಭೂಷಣದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಮೊದಲು ಪ್ರಿಯಾಂಕ್ ಖರ್ಗೆ ಅವರು ಗೃಹ ಸಚಿವರಾಗಿ ರಾಜ್ಯದಲ್ಲಿ ಹೆಚ್ಚುತ್ತಿರುವ ಓಸಿ, ಮಟ್ಕಾ, ಡ್ರಗ್ಸ್ ದಂಧೆ ಹಾಗೂ ಬೆಂಗಳೂರಿನಲ್ಲಿ ತಡರಾತ್ರಿವರೆಗೆ ನಡೆಯುವ ಬಾರ್-ಪಬ್‌ಗಳ ಹಾವಳಿ ತಡೆಯುವತ್ತ ಗಮನ ಹರಿಸಲಿ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಲಿಂಗರಾಜ ಪಾಟೀಲ, ಎಂ.ಎಂ. ಹಿರೇಮಠ, ಎಂ.ಎಸ್. ಕರಿಗೌಡ್ರ, ಉಷಾ ದಾಸರ, ಅನಿಲ ಅಬ್ಬಿಗೇರಿ ಸೇರಿದಂತೆ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
“ಗೃಹಲಕ್ಷ್ಮಿ ಯೋಜನೆಯಲ್ಲಿ ಅನರ್ಹರಿಗೆ ಹಣ ಹೋಗಿದೆ ಎಂದು ಸರ್ಕಾರವೇ ಒಪ್ಪಿಕೊಳ್ಳುತ್ತಿದೆ. ಹಾಗಿದ್ದರೆ ಮೂರು ವರ್ಷಗಳ ಕಾಲ ಯೋಜನೆ ಜಾರಿಗೊಳಿಸಿದವರ ಹೊಣೆಗಾರಿಕೆ ಏನು? ಮಹಿಳೆಯರಿಗೆ ಅನ್ಯಾಯ ಮಾಡುವ ಯಾವುದೇ ಪರಿಷ್ಕರಣೆಗಳನ್ನು ನಾವು ಒಪ್ಪುವುದಿಲ್ಲ.”
– ಸಿ.ಸಿ. ಪಾಟೀಲ, ನರಗುಂದ ಶಾಸಕ
ಅಡ್ಡ ಮತದಾನ ಪ್ರಕರಣ
ಅಡ್ಡ ಮತದಾನದ ಪ್ರಕರಣದ ಕುರಿತು ಸತ್ಯಶೋಧನಾ ಸಮಿತಿ ತನಿಖೆ ನಡೆಸುತ್ತಿದ್ದು, ವರದಿ ಬಂದ ಬಳಿಕ ನೈಜತೆ ಹೊರಬರಲಿದೆ. ಪಕ್ಷಕ್ಕೆ ದ್ರೋಹ ಮಾಡಿದವರ ವಿರುದ್ಧ ವರಿಷ್ಠರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸಿ.ಸಿ. ಪಾಟೀಲ ಸ್ಪಷ್ಟಪಡಿಸಿದರು.



