ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಅಧಿಕೃತ ಬಿಡುಗಡೆಯ ದಿನಾಂಕ ಕೊನೆಗೂ ಘೋಷಣೆಯಾಗಿದೆ. ಹಲವು ದಿನಗಳಿಂದ ಹರಿದಾಡುತ್ತಿದ್ದ ಊಹಾಪೋಹಗಳಿಗೆ ತೆರೆ ಎಳೆದಿರುವ ಯಶ್, ತಮ್ಮ ಬಹುಕೋಟಿ ವೆಚ್ಚದ ಪ್ಯಾನ್-ವರ್ಡ್ ಸಿನಿಮಾವನ್ನು ಆಗಸ್ಟ್ 26ರಂದು ವಿಶ್ವದಾದ್ಯಂತ ಭರ್ಜರಿಯಾಗಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.
ಮೂಲತಃ ಈ ಸಿನಿಮಾ ಜೂನ್ 4ರಂದು ಬಿಡುಗಡೆಯಾಗಬೇಕಿತ್ತು. ಆದರೆ ಜಾಗತಿಕ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಚಿತ್ರತಂಡ ಬಿಡುಗಡೆ ದಿನಾಂಕವನ್ನು ಮುಂದೂಡಿತ್ತು. ಇತ್ತೀಚೆಗೆ ಅಮೆರಿಕದ ಲಾಸ್ ವೇಗಾಸ್‌ನಲ್ಲಿ ನಡೆದ ಪ್ರತಿಷ್ಠಿತ ಸಿನಿಮಾಕಾನ್ ಕಾರ್ಯಕ್ರಮದಲ್ಲಿ ಯಶ್ ಭಾಗವಹಿಸಿದ್ದು, ಅಲ್ಲಿ ಹಾಲಿವುಡ್ ಹಾಗೂ ಅಂತರರಾಷ್ಟ್ರೀಯ ವಿತರಕರಿಂದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಈ ಬೆಳವಣಿಗೆಯ ಬಳಿಕ ಜಾಗತಿಕ ಮಟ್ಟದಲ್ಲಿ ಚಿತ್ರದ ವಿತರಣೆಯನ್ನು ಇನ್ನಷ್ಟು ವಿಸ್ತರಿಸಲು ನಿರ್ಮಾಪಕರು ಮತ್ತು ನಿರ್ದೇಶಕಿ ಗೀತು ಮೋಹನ್‌ದಾಸ್ ಹೊಸ ಯೋಜನೆ ರೂಪಿಸಿದರು. ಅಂತರರಾಷ್ಟ್ರೀಯ ವಿತರಣಾ ಸಂಸ್ಥೆಗಳೊಂದಿಗೆ ಒಪ್ಪಂದಗಳನ್ನು ಅಂತಿಮಗೊಳಿಸಲು ಹೆಚ್ಚುವರಿ ಸಮಯ ಬೇಕಾದ ಹಿನ್ನೆಲೆಯಲ್ಲಿ ಬಿಡುಗಡೆಯನ್ನು ಆಗಸ್ಟ್‌ಗೆ ಮುಂದೂಡಲಾಗಿದೆ.
ಚಿತ್ರದ ಬಿಡುಗಡೆ ತಡವಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಮರುಚಿತ್ರೀಕರಣ ನಡೆಯುತ್ತಿದೆ, ನಿರ್ದೇಶಕರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ವದಂತಿಗಳು ಹರಿದಾಡಿದ್ದವು. ಆದರೆ ಇದೀಗ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸುವ ಮೂಲಕ ಚಿತ್ರತಂಡ ಆ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದೆ. ಸಿನಿಮಾ ಸಂಪೂರ್ಣ ಸಿದ್ಧವಾಗಿದ್ದು, ಸದ್ಯ ಜಾಗತಿಕ ಪ್ರಚಾರ ಹಾಗೂ ಬಿಡುಗಡೆಯ ಅಂತಿಮ ಸಿದ್ಧತೆಗಳು ಮಾತ್ರ ನಡೆಯುತ್ತಿವೆ ಎಂದು ತಿಳಿಸಲಾಗಿದೆ.
ಗೀತು ಮೋಹನ್‌ದಾಸ್ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಚಿತ್ರ ಮತ್ತೊಂದು ವಿಶೇಷತೆಯನ್ನು ಹೊಂದಿದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲದಲ್ಲಿ ನೇರವಾಗಿ ಚಿತ್ರೀಕರಿಸಲಾಗಿದ್ದು, ಬಳಿಕ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲೂ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಾಣದ ಈ ಚಿತ್ರದಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ ಮತ್ತು ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಭಾರೀ ನಿರೀಕ್ಷೆ ಮೂಡಿಸಿರುವ ‘ಟಾಕ್ಸಿಕ್’ ಆಗಸ್ಟ್ 26ರಂದು ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುವ ವಿಶ್ವಾಸವನ್ನು ಚಿತ್ರತಂಡ ಹೊಂದಿದೆ.



