ಹಾಸನ: ಮನೆ ನಿರ್ಮಾಣ ಕಾಮಗಾರಿ ವೇಳೆ ವಿದ್ಯುತ್ ಶಾಕ್‌ಗೆ ಅರಣ್ಯ ಇಲಾಖೆಯ ರೇಂಜ್ ಫಾರೆಸ್ಟ್ ಆಫೀಸರ್ ಮೃತಪಟ್ಟಿರುವ ಘಟನೆ ಹಾಸನ ನಗರದ ಸತ್ಯಮಂಗಲ ಬಡಾವಣೆಯಲ್ಲಿ ಶನಿವಾರ ನಡೆದಿದೆ.
ಮೃತರನ್ನು ಜಗದೀಶ್ ಪಿ. (46) ಎಂದು ಗುರುತಿಸಲಾಗಿದೆ. ಅವರು ಕುಣಿಗಲ್‌ನಲ್ಲಿ ಆರ್‌ಎಫ್‌ಒ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸತ್ಯಮಂಗಲ ಬಡಾವಣೆಯಲ್ಲಿ ನೂತನ ಮನೆ ನಿರ್ಮಿಸುತ್ತಿದ್ದು, ಶನಿವಾರ ಮನೆಯ ಗೋಡೆಗೆ ಕ್ಯೂರಿಂಗ್‌ಗಾಗಿ ನೀರು ಹಾಕುತ್ತಿದ್ದ ವೇಳೆ ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಜಗದೀಶ್ ಅವರು 2015ರಿಂದ 2020ರವರೆಗೆ ಹಾಸನ ಜಿಲ್ಲೆಯಲ್ಲಿ ಆರ್‌ಎಫ್‌ಒ ಆಗಿ ಸೇವೆ ಸಲ್ಲಿಸಿದ್ದರು. ಅವರ ಅಕಾಲಿಕ ನಿಧನಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

