HomeCrime Newsಪೆರೋಲ್ ಮೇಲೆ ಹೊರಬಂದ ಕುಖ್ಯಾತ ಕ್ರಿಮಿನಲ್ ಎನ್‌ಕೌಂಟರ್‌ನಲ್ಲಿ ಹತ್ಯೆ

ಪೆರೋಲ್ ಮೇಲೆ ಹೊರಬಂದ ಕುಖ್ಯಾತ ಕ್ರಿಮಿನಲ್ ಎನ್‌ಕೌಂಟರ್‌ನಲ್ಲಿ ಹತ್ಯೆ

For Dai;y Updates Join Our whatsapp Group

Spread the love

ಚಂಡೀಗಢ: ಪೆರೋಲ್ ಮೇಲೆ ಬಿಡುಗಡೆಯಾಗಿ ಮತ್ತೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದ ಹರಿಯಾಣದ ಕುಖ್ಯಾತ ಕ್ರಿಮಿನಲ್ ಗೋಪಾಲ್, ಸೋನಿಪತ್ ಜಿಲ್ಲೆಯಲ್ಲಿ ನಡೆದ ಪೊಲೀಸ್ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ದೇವೇಂದರ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸೋನಿಪತ್ ಪೊಲೀಸರಿಗೆ ಗೋಪಾಲ್ ತನ್ನ ಎದುರಾಳಿಯೊಬ್ಬನನ್ನು ಹತ್ಯೆ ಮಾಡಲು ಸಂಚು ರೂಪಿಸಿ ಓಡಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಲು ಮುಂದಾದ ವೇಳೆ ಗುಂಡಿನ ಚಕಮಕಿ ನಡೆದಿದೆ.

ಬಂಧನದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಗೋಪಾಲ್ ಪೊಲೀಸರ ಮೇಲೆಯೇ ಮನಬಂದಂತೆ ಗುಂಡು ಹಾರಿಸಿದ್ದಾನೆ. ಆತನಿಂದ ಹಾರಿಸಲಾದ ಎರಡು ಗುಂಡುಗಳು ಪೊಲೀಸ್ ವಾಹನಗಳಿಗೆ ತಗುಲಿದ್ದರೆ, ಮತ್ತೊಂದು ಗುಂಡು ಹೆಡ್ ಕಾನ್‌ಸ್ಟೆಬಲ್ ದೇವೇಂದರ್ ಅವರ ಕೈಗೆ ತಗುಲಿ ಗಾಯಗೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಿದ್ದು, ಈ ವೇಳೆ ಗೋಪಾಲ್ ಗಂಭೀರವಾಗಿ ಗಾಯಗೊಂಡಿದ್ದಾನೆ.

ತಕ್ಷಣವೇ ಆರೋಪಿಯನ್ನು ಹಾಗೂ ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಖಾನ್ಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಗೋಪಾಲ್ ಮೃತಪಟ್ಟಿದ್ದಾನೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ಸೋನಿಪತ್ ಜಿಲ್ಲೆಯ ಅಟಾಯಲ್ ಗ್ರಾಮದ ನಿವಾಸಿಯಾಗಿದ್ದ ಗೋಪಾಲ್ ವಿರುದ್ಧ ಹಲವು ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿದ್ದವು. 2010ರ ಕೊಲೆ ಪ್ರಕರಣ ಹಾಗೂ 2016ರಲ್ಲಿ ಗನೌರ್ ಪ್ರದೇಶದಲ್ಲಿ ನಡೆದ ಮತ್ತೊಂದು ಕೊಲೆ ಪ್ರಕರಣದಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

ಈ ವರ್ಷದ ಫೆಬ್ರವರಿಯಲ್ಲಿ 70 ದಿನಗಳ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ ಗೋಪಾಲ್, ಬಳಿಕ ಮದ್ಯದಂಗಡಿ ಮೇಲೆ ದಾಳಿ, ಬೆಂಕಿ ಹಚ್ಚುವ ಪ್ರಕರಣ, ಬ್ರೆಝಾ ಕಾರು ಕಳ್ಳತನ ಹಾಗೂ ಗುಂಡು ಹಾರಿಸಿ ವ್ಯಕ್ತಿಯ ಹತ್ಯೆಗೆ ಯತ್ನಿಸಿದ ಆರೋಪಗಳಲ್ಲಿ ಭಾಗಿಯಾಗಿದ್ದ. ಪೆರೋಲ್ ಅವಧಿ ಮುಗಿದ ಬಳಿಕವೂ ಆತ ಶರಣಾಗದೇ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!