ಬೆಂಗಳೂರು: ಪಿಜಿ ಮುಂದೆ ಮದ್ಯಪಾನ ಮಾಡುತ್ತಿದ್ದವರನ್ನು ಪ್ರಶ್ನಿಸಿದ್ದಕ್ಕೆ ಪಿಜಿ ಮಾಲೀಕನನ್ನು ಬ್ಯಾಟ್‌ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ಮಾಧವ್ ಮೆಟ್ಲಿ (40) ಎಂದು ಗುರುತಿಸಲಾಗಿದೆ. ಅವರು ಕಸ್ತೂರಿಬಾ ನಗರದಲ್ಲಿ ಪಿಜಿ ನಡೆಸುತ್ತಿದ್ದರು.
ಮಾಹಿತಿಯ ಪ್ರಕಾರ, ಪಿಜಿ ಮುಂಭಾಗದಲ್ಲಿ ಇಬ್ಬರು ಆರೋಪಿಗಳು ಮದ್ಯಪಾನ ಮಾಡುತ್ತಾ ಮಾತನಾಡುತ್ತಿದ್ದರು. ಇದನ್ನು ಗಮನಿಸಿದ ಮಾಧವ್ ಮೆಟ್ಲಿ, ಸ್ಥಳಕ್ಕೆ ತೆರಳಿ ಪ್ರಶ್ನಿಸಿದ್ದಾರೆ. ಈ ವೇಳೆ ಅವರ ಕೈಯಲ್ಲಿ ಬ್ಯಾಟ್ ಇದ್ದುದಾಗಿ ತಿಳಿದುಬಂದಿದೆ.
ಪ್ರಶ್ನೆ ಮಾಡಿದ ವಿಚಾರಕ್ಕೆ ಆರೋಪಿಗಳು ಹಾಗೂ ಮಾಲೀಕನ ನಡುವೆ ವಾಗ್ವಾದ ನಡೆದಿದ್ದು, ಪರಿಸ್ಥಿತಿ ಕೈಮೀರಿದೆ. ತಾನು ಹಲ್ಲೆಗೆ ಒಳಗಾಗುವ ಭಯದಿಂದ ಆರೋಪಿಗಳು ಮಾಧವ್ ಅವರ ಕೈಯಲ್ಲಿದ್ದ ಬ್ಯಾಟ್ ಕಸಿದುಕೊಂಡು ಅವರ ಮೇಲೆಯೇ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಮಾಧವ್ ಮೆಟ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.



