ಚೆನ್ನೈ: ದಳಪತಿ ವಿಜಯ್ ಅವರ ಜನ್ಮದಿನದಂದು ನಟಿ ತ್ರಿಷಾ ಕೃಷ್ಣನ್ ಯಾವುದೇ ಶುಭಾಶಯ ಪೋಸ್ಟ್ ಹಂಚಿಕೊಳ್ಳದಿರುವುದು ಹಾಗೂ ಸಾಮಾಜಿಕ ಜಾಲತಾಣದಲ್ಲಿ ವಿಜಯ್ ಅವರನ್ನು ಅನ್‌ಫಾಲೋ ಮಾಡಿರುವುದು ಕಾಲಿವುಡ್‌ನಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಅನಗತ್ಯ ಗಾಸಿಪ್‌ಗಳು ಹಾಗೂ ಟ್ರೋಲ್‌ಗಳನ್ನು ತಪ್ಪಿಸಲು ತ್ರಿಷಾ ಈ ರೀತಿಯ ನಿರ್ಧಾರ ತೆಗೆದುಕೊಂಡಿರಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿದ್ದರೂ, ಈ ಬೆಳವಣಿಗೆ ಸಂಬಂಧಿತ ಕುತೂಹಲವನ್ನು ಹೆಚ್ಚಿಸಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ವಿಷಯ ಬಹಿರಂಗವಾಗುತ್ತಿದ್ದಂತೆಯೇ ಅಭಿಮಾನಿಗಳು ವಿವಿಧ ರೀತಿಯ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಹಿಂದಿನ ಕೆಲವು ತಿಂಗಳುಗಳಲ್ಲಿ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ನಡುವೆ ವೈವಾಹಿಕ ಭಿನ್ನಾಭಿಪ್ರಾಯಗಳ ಸುದ್ದಿಗಳು ಹರಿದಾಡಿದ್ದವು. ಇದೇ ಸಮಯದಲ್ಲಿ ವಿಜಯ್ ಮತ್ತು ತ್ರಿಷಾ ನಡುವೆ ಆಪ್ತತೆ ಹೆಚ್ಚಾಗಿದೆ ಎಂಬ ಗಾಸಿಪ್ ಕೂಡ ಬಲವಾಗಿತ್ತು.
ಇವರಿಬ್ಬರ ಸ್ನೇಹದ ಬಗ್ಗೆ ರಾಜಕೀಯ ವಲಯಕ್ಕೂ ಚರ್ಚೆ ಹರಡಿದ್ದು, ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ ಪಕ್ಷದ ಮೂಲಕ ತ್ರಿಷಾ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂಬ ಊಹಾಪೋಹಗಳು ಸಾಮಾಜಿಕ ಹಾಗೂ ಸಿನಿಮಾ ವಲಯದಲ್ಲಿ ಗಮನ ಸೆಳೆದಿದ್ದವು.
ಈಗ ತ್ರಿಷಾ ಅವರ ಮೌನ ಮತ್ತು ಅನ್‌ಫಾಲೋ ನಡೆ ಹಿನ್ನೆಲೆಯಲ್ಲಿ ವಿಜಯ್ ಅವರ ವೈವಾಹಿಕ ಜೀವನ ಸುಧಾರಣೆಯ ಹಂತದಲ್ಲಿದೆ ಎಂಬ ಮತ್ತೊಂದು ಚರ್ಚೆಯೂ ನಡೆಯುತ್ತಿದೆ. ಕುಟುಂಬದ ಹಿರಿಯರ ಮಧ್ಯಸ್ಥಿಕೆಯಲ್ಲಿ ಸಂಬಂಧ ಸುಧಾರಣೆ ಪ್ರಯತ್ನಗಳು ನಡೆಯುತ್ತಿವೆ ಎಂಬ ಮಾತುಗಳು ಹರಿದಾಡುತ್ತಿವೆ.
ಆದರೆ ಈ ಎಲ್ಲಾ ವಿಚಾರಗಳ ಕುರಿತು ಯಾವುದೇ ಅಧಿಕೃತ ಸ್ಪಷ್ಟನೆ ಹೊರಬಂದಿಲ್ಲ. ಕಾಲಿವುಡ್ ವಲಯದಲ್ಲಿ ಈ ವಿಷಯ ಇದೀಗ ಹಾಟ್ ಟಾಪಿಕ್ ಆಗಿದ್ದು, ಮುಂದಿನ ದಿನಗಳಲ್ಲಿ ಸ್ಪಷ್ಟತೆ ದೊರೆಯುವ ನಿರೀಕ್ಷೆಯಿದೆ.



