ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್ಎಸ್ಎಸ್ ಅನ್ನು ಪದೇ ಪದೇ ಟೀಕಿಸುತ್ತಿರುವ ವಿಚಾರಕ್ಕೆ ಬಿಜೆಪಿ ಮುಖಂಡ ಸಿ.ಟಿ. ರವಿ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರಿಗೆ ಮಾಡಲು ಸಾಕಷ್ಟು ಕೆಲಸಗಳಿದ್ದು, ಆರ್ಎಸ್ಎಸ್ ಕುರಿತು ಹೇಳಿಕೆ ನೀಡುವುದಕ್ಕಿಂತ ರಾಜ್ಯದ ಗಂಭೀರ ಸಮಸ್ಯೆಗಳ ಕಡೆ ಗಮನಹರಿಸಬೇಕು ಎಂದು ಹೇಳಿದರು.
ಕರ್ನಾಟಕ ಡ್ರಗ್ಸ್ ಹಾವಳಿಯಿಂದ ತತ್ತರಿಸುತ್ತಿದ್ದು, ರಾಜ್ಯ ಡ್ರಗ್ಸ್ ಕ್ಯಾಪಿಟಲ್ ಆಗುವ ಆತಂಕ ಎದುರಾಗಿದೆ. ಇದರತ್ತ ಸರ್ಕಾರ ಗಮನಹರಿಸಬೇಕು. ಅಲ್ಲದೆ, ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗರು ದೊಡ್ಡ ಪ್ರಮಾಣದಲ್ಲಿ ಕರ್ನಾಟಕಕ್ಕೆ ಬರುತ್ತಿರುವ ಮಾಹಿತಿ ಇದೆ. ಇದು ದೇಶದ ಭದ್ರತೆಯ ದೃಷ್ಟಿಯಿಂದ ಗಂಭೀರ ವಿಷಯವಾಗಿದ್ದು, ಸರ್ಕಾರ ಇದನ್ನು ನಿರ್ಲಕ್ಷಿಸಬಾರದು ಎಂದು ಹೇಳಿದರು.
ಭಯೋತ್ಪಾದಕರ ಸ್ಲೀಪರ್ ಸೆಲ್ಗಳ ಚಟುವಟಿಕೆಗಳಿಗೆ ಕರ್ನಾಟಕವನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಇರುವುದಾಗಿ ಹೇಳಿದ ಅವರು, ಈ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮಾಹಿತಿ ಸಂಗ್ರಹಿಸಿದ್ದು, ಉಗ್ರರ ಸಂಪರ್ಕ ಹೊಂದಿರುವ ಆರೋಪಿಗಳನ್ನು ಬಂಧಿಸಲಾಗಿದೆ. ಇಂತಹ ಗಂಭೀರ ವಿಷಯಗಳ ಬಗ್ಗೆ ಸರ್ಕಾರ ಹೆಚ್ಚಿನ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ನೀಟ್ ಪರೀಕ್ಷೆಗೆ ಸಂಬಂಧಿಸಿದ ಗೊಂದಲದ ಬಗ್ಗೆಯೂ ಮಾತನಾಡಿದ ಸಿ.ಟಿ. ರವಿ, ಕೆಪಿಸಿಸಿ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದ ವೇಳಾಪಟ್ಟಿಯನ್ನು ಒಂದು ದಿನ ಮುಂದೂಡಿದ್ದರೆ ಅಥವಾ ಹಿಂದೂಡಿದ್ದರೆ, ಪರೀಕ್ಷೆಗೆ ಬಂದಿದ್ದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕುತ್ತಿರಲಿಲ್ಲ ಎಂದು ಹೇಳಿದರು.
ಪರೀಕ್ಷೆಯಿಂದ ವಂಚಿತರಾಗಿ ಕಣ್ಣೀರು ಹಾಕಿದ ವಿದ್ಯಾರ್ಥಿಗಳ ನೋವಿನ ಬಗ್ಗೆ ಸರ್ಕಾರ ಯೋಚಿಸಬೇಕು. ಇದು ಅಧಿಕಾರದ ಅಹಂಕಾರದ ಪರಿಣಾಮ. ಅಧಿಕಾರದ ಮದವನ್ನು ಬಿಟ್ಟು ಜನರ ಹಿತದೃಷ್ಟಿಯಿಂದ ಆದ್ಯತೆಗಳನ್ನು ನಿರ್ಧರಿಸಬೇಕು ಎಂದು ಟೀಕಿಸಿದರು.
ಕಾಲವೇ ಎಲ್ಲದಕ್ಕೂ ಉತ್ತರ ನೀಡುತ್ತದೆ. ಅಧಿಕಾರದ ಅಹಂಕಾರದಲ್ಲಿ ಬದುಕಿದವರು ಕೊನೆಯಲ್ಲಿ ಇತಿಹಾಸದಲ್ಲಿ ಉಳಿದಿಲ್ಲ. ಉತ್ತಮ ಕೆಲಸ ಮಾಡುವ ಅವಕಾಶ ಇದ್ದಾಗ ಅದನ್ನು ಬಿಟ್ಟು, ಉತ್ತಮ ಕೆಲಸ ಮಾಡುವವರ ವಿರುದ್ಧ ಅಪಪ್ರಚಾರ ನಡೆಸುವುದು ಸರಿಯಲ್ಲ. ಅಪಪ್ರಚಾರದಿಂದ ಪ್ರಚಾರ ಸಿಗಬಹುದು, ಆದರೆ ಅದು ಯಾವುದೇ ಘನ ಕಾರ್ಯವಲ್ಲ ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ ಸಿ.ಟಿ. ರವಿ ವಾಗ್ದಾಳಿ ನಡೆಸಿದರು.



