ಹಗರಿಬೊಮ್ಮನಹಳ್ಳಿ: ತಾಲೂಕಿನ ಮರಬ್ಬಿಹಾಳ ಗ್ರಾಮದಲ್ಲಿ ಲಕ್ಷ್ಮಿ ಪೌಲ್ಟ್ರಿ ಫಾರಂ ಮಾಲೀಕರಾಗಿದ್ದ ದಿವಂಗತ ಸುಬ್ಬರೆಡ್ಡಿ ಅವರ ಸ್ಮರಣಾರ್ಥ ಅಪ್ಪು ಕ್ರಿಕೆಟರ್ಸ್ ವತಿಯಿಂದ ಆಯೋಜಿಸಲಾದ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಮಾಜಿ ಶಾಸಕ ಎಸ್. ಭೀಮನಾಯ್ಕ ನಾಣ್ಯ ತೂರುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ದಿವಂಗತ ಸುಬ್ಬರೆಡ್ಡಿ ಅವರು ಸಮಾಜದೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದ ಸರಳ ಹಾಗೂ ಸಜ್ಜನ ವ್ಯಕ್ತಿಯಾಗಿದ್ದರು. ಅವರ ನೆನಪನ್ನು ಚಿರಸ್ಥಾಯಿಯಾಗಿ ಉಳಿಸಿಕೊಳ್ಳುವ ಉದ್ದೇಶದಿಂದ ಯುವಕರು ಜಿಲ್ಲಾಮಟ್ಟದ ಕ್ರೀಡಾಕೂಟ ಆಯೋಜಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.
ಸುಬ್ಬರೆಡ್ಡಿ ಅವರ ಆದರ್ಶಗಳು, ಸಮಾಜಮುಖಿ ಚಿಂತನೆ ಹಾಗೂ ಸೇವಾ ಮನೋಭಾವ ಯುವಜನತೆಗೆ ಸದಾ ಪ್ರೇರಣೆಯಾಗಲಿ. ಕ್ರೀಡೆಗಳು ಯುವಕರಲ್ಲಿ ಶಿಸ್ತು, ನಾಯಕತ್ವ ಹಾಗೂ ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಭೀಮನಾಯ್ಕ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕುರಿ ಶಿವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋರಿ ಗೋಣಿಬಸಪ್ಪ, ಬಾಲಕೃಷ್ಣ ಬಾಬು, ಉಮಾಪತಿ ಸ್ವಾಮಿ, ಸಿಕಂದರ್, ಬಾಲಪ್ಪ ಸೇರಿದಂತೆ ಸ್ಥಳೀಯ ಮುಖಂಡರು, ಕ್ರೀಡಾಭಿಮಾನಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಕ್ರೀಡೆಗಳು ಯುವಕರನ್ನು ಆರೋಗ್ಯವಂತರನ್ನಾಗಿಸುವುದರ ಜೊತೆಗೆ ಉತ್ತಮ ವ್ಯಕ್ತಿತ್ವ ರೂಪಿಸುತ್ತವೆ. ದಿ. ಸುಬ್ಬರೆಡ್ಡಿ ಅವರ ನೆನಪಿನಲ್ಲಿ ಆಯೋಜಿಸಿರುವ ಈ ಪಂದ್ಯಾವಳಿ ಯುವಕರಿಗೆ ಪ್ರೇರಣೆಯಾಗಲಿದೆ ಎಂದು ಮಾಜಿ ಶಾಸಕರಾದ ಎಸ್. ಭೀಮನಾಯ್ಕ ಹೇಳಿದ್ದಾರೆ.



