ಬೆಂಗಳೂರು: ಕೊಲೆ, ಕೊಲೆ ಯತ್ನ, ದರೋಡೆ ಹಾಗೂ ಕಳ್ಳತನ ಸೇರಿದಂತೆ 67 ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮತ್ತು 30ಕ್ಕೂ ಹೆಚ್ಚು ಜಾಮೀನು ರಹಿತ ವಾರೆಂಟ್‌ಗಳು ಬಾಕಿ ಇದ್ದರೂ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ಬಾಣಸವಾಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಸೈಯದ್ ಅಬ್ರಾರ್ (32) ಎಂದು ಗುರುತಿಸಲಾಗಿದೆ. ಈತ ಕೆ.ಜಿ. ಹಳ್ಳಿ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದು, ಕಳೆದ ಮಾರ್ಚ್ ತಿಂಗಳಲ್ಲಿ ಹೆಚ್‌ಆರ್‌ಬಿಆರ್ ಬಡಾವಣೆ ಸಮೀಪ ಬೀಗ ಹಾಕಿದ್ದ ಮನೆಯ ಬಾಗಿಲು ಮುರಿದು ಸುಮಾರು 10 ಸಾವಿರ ರೂಪಾಯಿ ನಗದು ಕಳ್ಳತನ ಮಾಡಿ ಪರಾರಿಯಾಗಿದ್ದ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬಾಣಸವಾಡಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಹೆಚ್.ಸಿ. ಸುದರ್ಶನ್ ಹಾಗೂ ಪಿಎಸ್ಐ ಬಿ.ಟಿ. ವೆಂಕಟರಮಣಪ್ಪ ನೇತೃತ್ವದ ತಂಡ ಆರೋಪಿಯ ಪತ್ತೆಗಾಗಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿತ್ತು. ತನಿಖೆ ವೇಳೆ ಕಳ್ಳತನದ ಬಳಿಕ ಬೈಕ್‌ನಲ್ಲಿ ಪರಾರಿಯಾಗುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದನ್ನೇ ಪ್ರಮುಖ ಸುಳಿವಾಗಿ ಬಳಸಿಕೊಂಡು ಪೊಲೀಸರು ಆರೋಪಿಯ ಗುರುತು ಪತ್ತೆಹಚ್ಚಿದ್ದರು.
ಆರೋಪಿ ಮೊಬೈಲ್ ಫೋನ್ ಬಳಕೆಯನ್ನು ಅತ್ಯಂತ ಕಡಿಮೆ ಮಾಡಿದ್ದಲ್ಲದೆ, ಒಂದೇ ಸ್ಥಳದಲ್ಲಿ ನೆಲೆಸದೇ ಆಗಾಗ್ಗೆ ಸ್ಥಳ ಬದಲಾಯಿಸುತ್ತಿದ್ದ ಕಾರಣ ಬಂಧನ ಕಾರ್ಯಾಚರಣೆ ಸವಾಲಿನದ್ದಾಗಿತ್ತು. ಆದರೂ ನಾಲ್ಕು ದಿನಗಳ ನಿರಂತರ ಕಾರ್ಯಾಚರಣೆಯ ಬಳಿಕ ಬಾಗಲೂರು ಸಮೀಪ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆಯನ್ನು ಬಾಣಸವಾಡಿ ಪೊಲೀಸರು ಮುಂದುವರಿಸಿದ್ದಾರೆ.



