ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ, ಅದರೊಳಗೆ ಆರೋಗ್ಯಕರ ಬದುಕಿನ ವಿಜ್ಞಾನ ಅಡಗಿದ್ದು, ಪ್ರತಿಯೊಬ್ಬರೂ ಯೋಗವನ್ನು ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ಯೋಗ ಸಾಧಕ ಶ್ರೀಧರ್ ಕೊಟಗಿ ಹೇಳಿದರು.
ಪಟ್ಟಣದ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಯೋಗಾಭ್ಯಾಸದಿಂದ ದೇಹ ಮತ್ತು ಮನಸ್ಸಿನ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸಂಸ್ಥೆಯ ಮುಖ್ಯಸ್ಥೆ ಸ್ವಾತಿ ಉ. ಪೈ ಮಾತನಾಡಿ, ಯೋಗವು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಶಾಂತಿ, ಏಕಾಗ್ರತೆ ಹಾಗೂ ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ. ವಿದ್ಯಾರ್ಥಿಗಳು ನಿತ್ಯ ಯೋಗಾಭ್ಯಾಸ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಭುಗೌಡ ಯಕಿಕೊಪ್ಪ ಅವರು ಆರೋಗ್ಯಕರ ಜೀವನಶೈಲಿಗೆ ಯೋಗದ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕರಾದ ಮೃತ್ಯುಂಜಯ ಹಿರೇಮಠ, ಆರ್.ಎಂ. ಕದಡಿ ಹಾಗೂ ರಾಜು ಲಮಾಣಿ ಅವರು ವಿದ್ಯಾರ್ಥಿಗಳಿಗೆ ವಿವಿಧ ಯೋಗಾಸನಗಳ ಪ್ರಾತ್ಯಕ್ಷಿಕೆ ನಡೆಸಿ ಯೋಗಾಭ್ಯಾಸ ಮಾಡಿಸಿದರು.
ಜೆ.ಡಿ. ಲಮಾಣಿ ಕಾರ್ಯಕ್ರಮ ನಿರೂಪಿಸಿದರೆ, ವಿಜಯಕುಮಾರ್ ಬಿಳಿಯಲಿ ವಂದಿಸಿದರು. ಡಾ. ಶಿವಾನಂದ ಹೂವಿನ, ಸುಮಿತ್ರಾ ಹೂಗಾರ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.



