ಮಂಡ್ಯ: ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಹಿನ್ನೆಲೆಯಲ್ಲಿ ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಾದ ಕೆಆರ್ಎಸ್ ಮತ್ತು ಕಬಿನಿಯಲ್ಲಿ ನೀರಿನ ಮಟ್ಟ ಆತಂಕಕಾರಿ ಪ್ರಮಾಣಕ್ಕೆ ಇಳಿದಿದೆ.
ಕಬಿನಿ ಜಲಾಶಯ ಈಗಾಗಲೇ ಡೆಡ್ ಸ್ಟೋರೇಜ್ ಹಂತ ತಲುಪಿದ್ದು, ಕೆಆರ್ಎಸ್ ಜಲಾಶಯದ ಮೇಲೆ ಸಂಪೂರ್ಣ ಒತ್ತಡ ಬಿದ್ದಿದೆ.
ಸದ್ಯ ಕೆಆರ್ಎಸ್ ಜಲಾಶಯದಲ್ಲಿ ನೀರಿನ ಮಟ್ಟ 81 ಅಡಿಗೆ ತಲುಪಿದ್ದು, ಬಳಕೆಗೆ ಕೇವಲ 6 ಟಿಎಂಸಿ ನೀರು ಮಾತ್ರ ಲಭ್ಯವಿದೆ ಎಂದು ಅಂದಾಜಿಸಲಾಗಿದೆ. ಬೆಂಗಳೂರು, ಮಂಡ್ಯ ಹಾಗೂ ಮೈಸೂರು ಸೇರಿದಂತೆ ಹಲವು ನಗರಗಳಿಗೆ ಕುಡಿಯುವ ನೀರು ಪೂರೈಕೆಗಾಗಿ ಪ್ರತಿದಿನ ಸುಮಾರು 1,800 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ.
ಕಬಿನಿಯಲ್ಲಿ ನೀರಿನ ಲಭ್ಯತೆ ಇಲ್ಲದ ಕಾರಣ ಬೆಂಗಳೂರಿಗೆ ಭಾಗಶಃ ಕೆಆರ್ಎಸ್ನಿಂದಲೇ ನೀರು ಪೂರೈಕೆಯಾಗುತ್ತಿದ್ದು, ಮುಂದಿನ ಮೂರು ತಿಂಗಳ ಕಾಲ ಇದೇ ನೀರಿನ ಸಂಗ್ರಹವನ್ನು ಸಮರ್ಪಕವಾಗಿ ನಿರ್ವಹಿಸುವ ಸವಾಲು ಎದುರಾಗಿದೆ.
ಇದೇ ವೇಳೆ, ರೈತರು ತಮ್ಮ ಬೆಳೆಗಳಿಗೆ ನೀರು ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿದ್ದು, ಜಲಾಶಯದಲ್ಲಿನ ಸೀಮಿತ ನೀರಿನ ಲಭ್ಯತೆ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಮುಂದಿನ ದಿನಗಳಲ್ಲಿ ಸಮರ್ಪಕ ಮಳೆಯಾಗದಿದ್ದರೆ ಕುಡಿಯುವ ನೀರಿನ ಪೂರೈಕೆಯ ಮೇಲೆಯೂ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.



