ಬೆಂಗಳೂರು: ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿಯಾಗುತ್ತಿದ್ದಾನೆ ಎಂಬ ಕಾರಣಕ್ಕೆ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಹತ್ಯೆ ಮಾಡಿರುವ ಆರೋಪ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಬಳಿಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರನ್ನು ನಂಬಿಸಲು ಯತ್ನಿಸಿದ್ದ ಪತ್ನಿಯ ಕೃತ್ಯವನ್ನು ಪೊಲೀಸರು ಬಯಲಿಗೆಳೆದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ ಅನಿತಾ ಹಾಗೂ ಆಕೆಯ ಪ್ರಿಯಕರ ಮಧುಸೂಧನ್ನನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ದೊಡ್ಡತೋಗೂರಿನ ನಿವಾಸದಲ್ಲಿ ಅಕ್ಟೋಬರ್ 12ರಂದು ಉಪೇಂದ್ರ (40) ಎಂಬವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು.
ಪತಿಯ ಸಾವಿನ ವಿಚಾರವನ್ನು ಕುಟುಂಬಸ್ಥರಿಗೆ ತಿಳಿಸಿದ್ದ ಅನಿತಾ, ಉಪೇಂದ್ರ ಜಾರಿ ಬಿದ್ದ ಬಳಿಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಿದ್ದಳು. ಅಷ್ಟೇ ಅಲ್ಲದೆ, ಪತಿಯ ಮೃತದೇಹದ ಮುಂದೆ ಕಣ್ಣೀರಿಟ್ಟು ದುಃಖ ವ್ಯಕ್ತಪಡಿಸುವ ಮೂಲಕ ಸಾವಿನ ಹಿಂದಿನ ಸತ್ಯವನ್ನು ಮರೆಮಾಚಲು ಪ್ರಯತ್ನಿಸಿದ್ದಳು ಎನ್ನಲಾಗಿದೆ. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬಯಲಾಯ್ತು ಕೊಲೆ ರಹಸ್ಯ!
ಉಪೇಂದ್ರ ಅವರ ಸಾವಿನ ಕುರಿತು ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಇತ್ತೀಚೆಗೆ ಮರಣೋತ್ತರ ಪರೀಕ್ಷೆಯ ವರದಿ ಲಭ್ಯವಾಗಿತ್ತು. ವರದಿಯಲ್ಲಿ ಉಪೇಂದ್ರ ಹೃದಯಾಘಾತದಿಂದ ಮೃತಪಟ್ಟಿಲ್ಲ, ಬದಲಾಗಿ ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿತ್ತು. ಇದರಿಂದ ಅನುಮಾನಗೊಂಡ ಪೊಲೀಸರು ಪ್ರಕರಣದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದರು.
ಘಟನೆ ನಡೆದ ರಾತ್ರಿ ಉಪೇಂದ್ರ ಅವರ ಮನೆಗೆ ಅಪರಿಚಿತ ವ್ಯಕ್ತಿಯೊಬ್ಬ ಬಂದಿದ್ದ ಮಾಹಿತಿ ಪೊಲೀಸರಿಗೆ ದೊರೆತಿತ್ತು. ಈ ಸುಳಿವಿನ ಆಧಾರದಲ್ಲಿ ಮಧುಸೂಧನ್ನನ್ನು ವಶಕ್ಕೆ ಪಡೆದ ಪೊಲೀಸರು, ಅನಿತಾಳೊಂದಿಗೆ ವಿಚಾರಣೆ ನಡೆಸಿದಾಗ ಹತ್ಯೆಯ ಹಿಂದಿನ ಸಂಚು ಬಹಿರಂಗವಾಗಿದೆ.
ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯ ಹತ್ಯೆಗೆ ಸಂಚು!
ಪೊಲೀಸರ ತನಿಖೆಯ ಪ್ರಕಾರ, ಅನಿತಾ ಮತ್ತು ಮಧುಸೂಧನ್ ಹಲವು ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಈ ವಿಚಾರ ಉಪೇಂದ್ರ ಅವರಿಗೂ ತಿಳಿದಿದ್ದು, ಇದೇ ಕಾರಣಕ್ಕೆ ಪತಿ-ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಅಕ್ಟೋಬರ್ 11ರ ರಾತ್ರಿ ಕೂಡ ದಂಪತಿ ನಡುವೆ ಗಲಾಟೆ ನಡೆದಿತ್ತು.
ಈ ವೇಳೆ ಪತಿಯೊಂದಿಗೆ ಜಗಳವಾಡಿದ್ದ ಅನಿತಾ, ತನ್ನ ಪ್ರಿಯಕರ ಮಧುಸೂಧನ್ಗೆ ಕರೆ ಮಾಡಿದ್ದಳು. ಪತಿ ಪದೇಪದೇ ಗಲಾಟೆ ಮಾಡುತ್ತಿದ್ದಾನೆ, ಆತನನ್ನು ಕೊಲೆ ಮಾಡಲು ಮನೆಗೆ ಬರುವಂತೆ ತಿಳಿಸಿದ್ದಳು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಬೆಡ್ರೂಮ್ನಲ್ಲಿ ಮಲಗಿದ್ದ ಪತಿಯನ್ನೇ ಉಸಿರುಗಟ್ಟಿಸಿ ಹತ್ಯೆ!
ಅನಿತಾಳ ಕರೆ ಮೇರೆಗೆ ಮನೆಗೆ ಬಂದ ಮಧುಸೂಧನ್, ಬೆಡ್ರೂಮ್ನಲ್ಲಿ ಮಲಗಿದ್ದ ಉಪೇಂದ್ರ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಅನಿತಾ ಕೂಡ ಪ್ರಿಯಕರನಿಗೆ ಸಹಕರಿಸಿದ್ದು, ಪತಿಯ ಬಾಯಿ ಮತ್ತು ಮೂಗನ್ನು ಮುಚ್ಚಿದ್ದಳು. ಬಳಿಕ ಮಧುಸೂಧನ್ ಉಪೇಂದ್ರ ಅವರ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಕೊಲೆ ಮಾಡಿದ ಬಳಿಕ ಮಧುಸೂಧನ್ನನ್ನು ಮನೆಯಿಂದ ಕಳುಹಿಸಿದ್ದ ಅನಿತಾ, ಪತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರ ಮುಂದೆ ನಾಟಕವಾಡಿದ್ದಳು. ಪತಿಯ ಮೃತದೇಹದ ಮುಂದೆ ಕಣ್ಣೀರಿಟ್ಟು ಸಾವಿನ ಬಗ್ಗೆ ಅನುಮಾನ ಬಾರದಂತೆ ನಡೆದುಕೊಂಡಿದ್ದಳು ಎನ್ನಲಾಗಿದೆ.
ಆದರೆ, ಮರಣೋತ್ತರ ಪರೀಕ್ಷೆಯ ವರದಿ ಪೊಲೀಸರ ಕೈ ಸೇರುತ್ತಿದ್ದಂತೆಯೇ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಉಪೇಂದ್ರ ಅವರ ಸಾವಿನ ಹಿಂದಿನ ಅಸಲಿ ಕಾರಣವನ್ನು ಪತ್ತೆಹಚ್ಚಿದ ಪೊಲೀಸರು, ಅನಿತಾ ಮತ್ತು ಮಧುಸೂಧನ್ನನ್ನು ಬಂಧಿಸಿದ್ದಾರೆ. ಸದ್ಯ ಇಬ್ಬರು ಆರೋಪಿಗಳ ವಿರುದ್ಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.









