ಬೆಂಗಳೂರು: 6ನೇ ತರಗತಿಗಾಗಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಬಿಡುಗಡೆ ಮಾಡಿರುವ ಕನ್ನಡ ಪಠ್ಯಪುಸ್ತಕಕ್ಕೆ ಮಾಜಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಅಥವಾ ಸಂಬಂಧಿತ ಶಿಕ್ಷಣ ತಜ್ಞರೊಂದಿಗೆ ಸಮಾಲೋಚನೆ ನಡೆಸದೇ ಪುಸ್ತಕ ಪ್ರಕಟಿಸಲಾಗಿದೆ ಎಂದುಆರೋಪಿಸಿದ್ದಾರೆ.
‘ಕೃಷ್ಣ’ ಎಂಬ ಹೆಸರಿನ ಈ ಪಠ್ಯಪುಸ್ತಕದಲ್ಲಿ ಕನ್ನಡದ ವೈಚಾರಿಕ ಪರಂಪರೆ, ಪ್ರಾದೇಶಿಕ ಸಂಸ್ಕೃತಿ ಹಾಗೂ ಸ್ಥಳೀಯ ಜೀವನಶೈಲಿಗೆ ಅಗತ್ಯವಾದ ಪ್ರಾಮುಖ್ಯತೆ ನೀಡಿಲ್ಲ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರಾವಳಿ ಕರ್ನಾಟಕ, ಉತ್ತರ ಕರ್ನಾಟಕ, ಮಲೆನಾಡು ಹಾಗೂ ಹಳೆ ಮೈಸೂರು ಭಾಗಗಳ ಜಾನಪದ ಪರಂಪರೆ, ಸಾಹಿತ್ಯ, ಸಂಸ್ಕೃತಿ ಮತ್ತು ಜೀವನ ಪದ್ಧತಿಯನ್ನು ಪುಸ್ತಕದಲ್ಲಿ ಸಮರ್ಪಕವಾಗಿ ಪ್ರತಿಬಿಂಬಿಸಲಾಗಿಲ್ಲ ಎಂದು ಆರೋಪಿಸಿದರು.
ಪಠ್ಯದಲ್ಲಿರುವ ಸಮತೋಲನ ಆಹಾರದ ಕುರಿತ ಪಾಠದಲ್ಲಿಯೂ ಮೊಟ್ಟೆ, ಮೀನು ಹಾಗೂ ಮಾಂಸಾಹಾರದ ಉಲ್ಲೇಖವಿಲ್ಲದೆ ಕೇವಲ ಸಸ್ಯಾಹಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದು ಸಮತೋಲಿತ ಮತ್ತು ಸಮಗ್ರ ನಿರೂಪಣೆಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.
“ನಾನು ಹಿಂದೂ ಧರ್ಮದಲ್ಲಿ ಹುಟ್ಟಿದವನು. ಶ್ರೀಕೃಷ್ಣನ ಬಗ್ಗೆ ನನಗೆ ಯಾವುದೇ ವಿರೋಧವಿಲ್ಲ. ಆದರೆ ಶಿಕ್ಷಣ ಮತ್ತು ಧರ್ಮವನ್ನು ಬೆರೆಸಿ ಮಕ್ಕಳಿಗೆ ಪಾಠ ಮಾಡುವುದು ಸೂಕ್ತವಲ್ಲ. ಶಿಕ್ಷಣ ವ್ಯವಸ್ಥೆಯಲ್ಲಿ ಸಮಾನತೆ ಮತ್ತು ವೈವಿಧ್ಯತೆ ಪ್ರತಿಬಿಂಬಿಸಬೇಕು” ಎಂದು ಮಧು ಬಂಗಾರಪ್ಪ ಹೇಳಿದರು.
ರಾಜ್ಯದ ಪಠ್ಯಕ್ರಮ ಅಭಿವೃದ್ಧಿ ಸಂಸ್ಥೆ (ಡಿಎಸ್‌ಇಆರ್‌ಟಿ) ಈಗಾಗಲೇ ‘ಸವಿ ಕನ್ನಡ’, ‘ಸಿರಿ ಕನ್ನಡ’ ಮತ್ತು ‘ತಿಳಿ ಕನ್ನಡ’ ಸೇರಿದಂತೆ ಹಲವು ಪಠ್ಯಪುಸ್ತಕಗಳನ್ನು ಸಿದ್ಧಪಡಿಸಿದೆ. ಇಂತಹ ಪುಸ್ತಕಗಳನ್ನು ಪರಿಗಣಿಸದೇ ಹೊಸ ಪಠ್ಯವನ್ನು ಜಾರಿಗೆ ತರಲು ಮುಂದಾಗಿರುವುದು ಕನ್ನಡದ ಅಸ್ಮಿತೆಗೆ ಧಕ್ಕೆಯಾಗಿದೆ ಎಂದು ಅವರು ಆರೋಪಿಸಿದರು.
ಕರ್ನಾಟಕದ ಸಂಸ್ಕೃತಿ, ಆಚಾರ-ವಿಚಾರ, ಸಾಹಿತ್ಯ ಪರಂಪರೆ ಹಾಗೂ ಸ್ಥಳೀಯ ಜೀವನ ಮೌಲ್ಯಗಳನ್ನು ಒಳಗೊಂಡ ಹೊಸ ಪಠ್ಯಪುಸ್ತಕವನ್ನು ಸಿದ್ಧಪಡಿಸಬೇಕು. ಪ್ರಸ್ತುತ ಬಿಡುಗಡೆಯಾಗಿರುವ ಪುಸ್ತಕವನ್ನು ಕೂಡಲೇ ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು.
ಈ ವಿಚಾರವನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತಂದು, ಕೇಂದ್ರ ಸರ್ಕಾರಕ್ಕೆ ಅಧಿಕೃತವಾಗಿ ಪತ್ರ ಬರೆಯುವಂತೆ ಮನವಿ ಮಾಡುವುದಾಗಿ ತಿಳಿಸಿದ ಮಧು ಬಂಗಾರಪ್ಪ, ಅಗತ್ಯವಿದ್ದರೆ ಈ ವಿಷಯವನ್ನು ಹೋರಾಟದ ರೂಪದಲ್ಲೂ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ, ಪಠ್ಯಪುಸ್ತಕ ರಚನಾ ಸಮಿತಿಯಲ್ಲಿ ಕೆಲವು ಖಾಸಗಿ ಶಾಲೆ ಮತ್ತು ಕಾಲೇಜುಗಳ ಪ್ರತಿನಿಧಿಗಳನ್ನು ಸೇರಿಸಿರುವುದಕ್ಕೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದು, ಪಠ್ಯ ರಚನಾ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ರಾಜ್ಯದ ಪ್ರತಿನಿಧಿತ್ವ ಇರಬೇಕೆಂದು ಆಗ್ರಹಿಸಿದರು.



