ಬೆಂಗಳೂರು: ನಗರದಲ್ಲಿ ಪಾದಚಾರಿಗಳಿಗೆ ಸುರಕ್ಷಿತ ಸಂಚಾರ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಗೆ ಬಿಬಿಎಂಪಿ ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಅವರು “ಸುರಕ್ಷಿತ ಪಾದಚಾರಿ ಅಭಿಯಾನ”ಕ್ಕೆ ಚಾಲನೆ ನೀಡಿದ್ದು, ನಗರದ ಸುಮಾರು 2,000 ಕಿಲೋಮೀಟರ್ ವ್ಯಾಪ್ತಿಯ ಪ್ರಮುಖ ರಸ್ತೆಗಳನ್ನು ಆದ್ಯತೆ ಮೇರೆಗೆ ಗುರುತಿಸಲಾಗಿದೆ.
ಆರ್ಟಿರಿಯಲ್ ಹಾಗೂ ಸಬ್-ಆರ್ಟಿರಿಯಲ್ ರಸ್ತೆಗಳಲ್ಲಿ ಫುಟ್‌ಪಾತ್ ಒತ್ತುವರಿ ಮಾಡಿಕೊಂಡಿರುವವರಿಗೆ ಜುಲೈ 1ರವರೆಗೆ ಸ್ವಯಂಪ್ರೇರಿತವಾಗಿ ತೆರವುಗೊಳಿಸಲು ಅವಕಾಶ ನೀಡಲಾಗಿದೆ. ಗಡುವಿನ ಬಳಿಕ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಚಿವರು ಎಚ್ಚರಿಕೆ ನೀಡಿದ್ದಾರೆ.
ಜುಲೈ 1ರಿಂದ ಜಾರಿಗೆ ಬರುವ ಪ್ರಮುಖ ನಿಯಮಗಳು
- ಫುಟ್‌ಪಾತ್ ಒತ್ತುವರಿ ತೆರವುಗೊಳಿಸದಿದ್ದರೆ ₹250 ರಿಂದ ₹10,000ವರೆಗೆ ದಂಡ ವಿಧಿಸಲಾಗುವುದು.
- ಪಾದಚಾರಿ ಮಾರ್ಗಗಳಲ್ಲಿ ಜಾಹೀರಾತು ಫಲಕಗಳು ಅಥವಾ ಬೋರ್ಡ್‌ಗಳನ್ನು ಅಳವಡಿಸಿದರೆ ದಂಡ ಹಾಕಲಾಗುವುದು.
- ಅಂಗಡಿಗಳು ಫುಟ್‌ಪಾತ್ ಅತಿಕ್ರಮಿಸಿಕೊಂಡಿರುವುದು ಕಂಡುಬಂದರೆ, ಅಗತ್ಯವಿದ್ದಲ್ಲಿ ವ್ಯಾಪಾರ ಪರವಾನಿಗೆ ರದ್ದುಪಡಿಸುವ ಕ್ರಮ ಕೈಗೊಳ್ಳಬಹುದು.
- ಪಾದಚಾರಿ ಮಾರ್ಗಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ಇರುವುದಿಲ್ಲ.
- ಫುಟ್‌ಪಾತ್ ಮೇಲೆ ನಿಲ್ಲಿಸಿರುವ ವಾಹನಗಳನ್ನು ಟೋಯಿಂಗ್ ಮೂಲಕ ತೆರವುಗೊಳಿಸಲಾಗುವುದು.
ಬಿಡಾಡಿ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ
ನಗರದ ರಸ್ತೆ ಬದಿಗಳು ಹಾಗೂ ಫುಟ್‌ಪಾತ್‌ಗಳಲ್ಲಿ ವಾರಸುದಾರರಿಲ್ಲದೆ ಬಿಟ್ಟುಹೋಗಿರುವ ವಾಹನಗಳ ವಿರುದ್ಧವೂ ಬಿಬಿಎಂಪಿ ಕ್ರಮ ಕೈಗೊಳ್ಳಲಿದೆ.
- ಜುಲೈ 1ರಿಂದ ಇಂತಹ ವಾಹನಗಳಿಗೆ ಸ್ಟಿಕರ್ ಅಂಟಿಸಿ ನೋಟಿಸ್ ನೀಡಲಾಗುವುದು.
- ಜುಲೈ 10ರೊಳಗೆ ವಾಹನಗಳನ್ನು ತೆರವುಗೊಳಿಸದಿದ್ದರೆ ಅಧಿಕಾರಿಗಳು ಅವುಗಳನ್ನು ವಶಕ್ಕೆ ಪಡೆದು ಹರಾಜು ಪ್ರಕ್ರಿಯೆ ಆರಂಭಿಸಲಿದ್ದಾರೆ.
ಬಸ್ ನಿಲ್ದಾಣಗಳಿಗೂ ಹೊಸ ನಿಯಮ
ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಸಿಗ್ನಲ್‌ಗಳಿಂದ 75 ಮೀಟರ್ ವ್ಯಾಪ್ತಿಯೊಳಗೆ ಬಸ್ ನಿಲ್ದಾಣಗಳನ್ನು ಸ್ಥಾಪಿಸಬಾರದು ಎಂಬ ನಿಯಮವನ್ನೂ ಸಚಿವ ಕೃಷ್ಣ ಭೈರೇಗೌಡ ಘೋಷಿಸಿದ್ದಾರೆ.
ನಗರದಲ್ಲಿ ಪಾದಚಾರಿಗಳ ಸುರಕ್ಷತೆ, ಸುಗಮ ಸಂಚಾರ ಹಾಗೂ ಸಾರ್ವಜನಿಕ ಸ್ಥಳಗಳ ಸಮರ್ಪಕ ಬಳಕೆಗೆ ಈ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದ್ದು, ನಾಗರಿಕರು ನಿಯಮ ಪಾಲನೆ ಮಾಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.



