ದೇವನಹಳ್ಳಿ: ಸರಣಿ ಬೈಕ್ ಕಳ್ಳತನ ಪ್ರಕರಣ ಭೇದಿಸಿರುವ ವಿಜಯಪುರ ಠಾಣೆ ಪೊಲೀಸರು 42 ಕಳ್ಳತನದ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದು, ಇದೀಗ ಅವುಗಳನ್ನು ಮಾಲೀಕರಿಗೆ ಮರಳಿಸುವ ಕಾರ್ಯಕ್ಕೂ ಹೊಸ ಮಾದರಿ ರೂಪಿಸಿದ್ದಾರೆ. ಕಳೆದುಹೋದ ಬೈಕ್‌ಗಳ ನಿರೀಕ್ಷೆಯನ್ನೇ ಕೈಬಿಟ್ಟಿದ್ದ ಸಂತ್ರಸ್ತರಿಗೆ ಇದು ಸಂತಸದ ಸುದ್ದಿಯಾಗಿದೆ.
ಸಾಮಾನ್ಯವಾಗಿ ಕಳ್ಳತನವಾದ ವಾಹನ ಪತ್ತೆಯಾದ ಬಳಿಕ ಅದನ್ನು ಪಡೆಯಲು ನ್ಯಾಯಾಲಯದ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗುತ್ತದೆ. ಆದರೆ ವಿಜಯಪುರ ಪೊಲೀಸರು ಜಾರಿಗೆ ತಂದಿರುವ ಜನಸ್ನೇಹಿ ಕ್ರಮದಡಿ, ವಾಹನ ಮಾಲೀಕರು ಅಗತ್ಯ ದಾಖಲೆಗಳು ಮತ್ತು ಬಾಂಡ್ ಸಲ್ಲಿಸಿ ನೇರವಾಗಿ ಪೊಲೀಸ್ ಠಾಣೆಯಲ್ಲೇ ತಮ್ಮ ಬೈಕ್‌ಗಳನ್ನು ವಾಪಸ್ ಪಡೆಯುತ್ತಿದ್ದಾರೆ.
ಕಳ್ಳತನದ ವಾಹನಗಳನ್ನು ಕೇವಲ 2 ರಿಂದ 3 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದ ಖಲೀಲ್ ಅಹ್ಮದ್ ಬಂಧನದ ಬಳಿಕ 42 ಬೈಕ್‌ಗಳು ಪತ್ತೆಯಾಗಿದ್ದು, ಸಾರ್ವಜನಿಕರು ಪೊಲೀಸರ ಕಾರ್ಯಾಚರಣೆ ಮತ್ತು ವಾಹನ ವಾಪಸ್ ನೀಡುವ ಕ್ರಮಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



