ಬೆಂಗಳೂರು: ರಾಜ್ಯ ಮತ್ತು ದೇಶದ ಆರ್ಥಿಕ ಪ್ರಗತಿಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಈ ವಲಯದ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಲು ಸರ್ಕಾರ ಬದ್ಧವಾಗಿದೆ ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಆಯೋಜಿಸಿದ್ದ ‘ಇ-ಖಾತಾ ಮತ್ತು ನಗರ ಅಭಿವೃದ್ಧಿ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಜಿಡಿಪಿಗೆ ಶೇ.31ರಷ್ಟು ಹಾಗೂ ರಫ್ತು ವಲಯಕ್ಕೆ ಶೇ.45ರಿಂದ 48ರಷ್ಟು ಕೊಡುಗೆ ನೀಡುತ್ತಿರುವ ಎಂಎಸ್‌ಎಂಇ ವಲಯವನ್ನು ಯಾವುದೇ ಸರ್ಕಾರ ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದರು.
ಗ್ರಾಮ ಪಂಚಾಯಿತಿ ಅಥವಾ ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾಗಿರುವ ಕೈಗಾರಿಕಾ ಪ್ರದೇಶಗಳ ಆಸ್ತಿ ತೆರಿಗೆ ಸಂಬಂಧಿತ ಗೊಂದಲಗಳನ್ನು ನಿವಾರಿಸಲಾಗುವುದು. ಈ ಕುರಿತು ಕೆಐಎಡಿಬಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇ-ಖಾತಾ ವ್ಯವಸ್ಥೆ ಪಾರದರ್ಶಕತೆ ಹಾಗೂ ತ್ವರಿತ ಸೇವೆ ಒದಗಿಸುವ ಉದ್ದೇಶದಿಂದ ಜಾರಿಗೆ ತರಲಾಗಿದೆ. ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಯ 20.26 ಲಕ್ಷ ಆಸ್ತಿಗಳ ಪೈಕಿ ಶೇ.40ರಷ್ಟು ಆಸ್ತಿಗಳಿಗೆ ಮಾತ್ರ ಇ-ಖಾತಾ ನೀಡಲಾಗಿದೆ. ತಾಂತ್ರಿಕ ಸಮಸ್ಯೆಗಳು ಮತ್ತು ಕಾಗುಣಿತ ದೋಷಗಳ ತಿದ್ದುಪಡಿಗೆ ನೀಡಿರುವ ವಿನಾಯಿತಿಯನ್ನು ಇನ್ನಷ್ಟು ಸರಳಗೊಳಿಸುವ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಕೈಗಾರಿಕಾ ಪ್ರದೇಶಗಳಿಗೆ ಟ್ಯಾಂಕರ್ ಮುಕ್ತ ನೀರು ಸರಬರಾಜು, ಒಳಚರಂಡಿ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಸರ್ಕಾರ ಆದ್ಯತೆ ನೀಡಲಿದೆ. ಕೈಗಾರಿಕೆಗಳಿಗೆ ಹೊರೆಯಾಗುತ್ತಿರುವ ನೀರಿನ ದರ ಹಾಗೂ ಆಸ್ತಿ ತೆರಿಗೆಯನ್ನು ಮರುಪರಿಶೀಲಿಸಿ ಉದ್ಯಮ ಸ್ನೇಹಿ ನೀತಿಗಳನ್ನು ರೂಪಿಸುವ ಪ್ರಯತ್ನ ಮಾಡಲಾಗುವುದು ಎಂದರು.
ವಿವಿಧ ಇಲಾಖೆಗಳ ಪರವಾನಗಿ ಹಾಗೂ ಪ್ರಮಾಣಪತ್ರಗಳ ಪ್ರಕ್ರಿಯೆಯಲ್ಲಿ ಉಂಟಾಗುತ್ತಿರುವ ವಿಳಂಬ ನಿವಾರಣೆಗೆ ಕೈಗಾರಿಕೆಗಳಿಗಾಗಿಯೇ ಪ್ರತ್ಯೇಕ ‘ಏಕಗವಾಕ್ಷಿ’ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಎಂದು ಹೇಳಿದರು.
ಉದ್ಯಮಿಗಳ ಸಮಸ್ಯೆಗಳಿಗೆ ಕೇವಲ ಭರವಸೆ ನೀಡದೇ, ಎಫ್‌ಕೆಸಿಸಿಐ ಸಲ್ಲಿಸುವ ಲಿಖಿತ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿಯೂ ಉದ್ಯಮಿಗಳೊಂದಿಗೆ ನಿರಂತರ ಸಮಾಲೋಚನೆ ನಡೆಸಿ ಕೈಗಾರಿಕಾ ವಲಯದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಸಚಿವರು ಹೇಳಿದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಬಿ.ಬಿ. ಕಾವೇರಿ, ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ, ನಿಕಟಪೂರ್ವ ಅಧ್ಯಕ್ಷ ಆರ್. ಶಿವಕುಮಾರ್ ಸೇರಿದಂತೆ ವಿವಿಧ ಕೈಗಾರಿಕಾ ಸಂಘಗಳ ಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.



