ಒಟ್ಟಾವ: 1985ರಲ್ಲಿ ಸಂಭವಿಸಿದ್ದ ಏರ್ ಇಂಡಿಯಾ ಫ್ಲೈಟ್ 182 (ಕನಿಷ್ಕ) ಬಾಂಬ್ ಸ್ಫೋಟ ಪ್ರಕರಣದ ಕುರಿತು ನಾಲ್ಕು ದಶಕಗಳ ಬಳಿಕ ಕೆನಡಾದ ಗುಪ್ತಚರ ಸಂಸ್ಥೆ (ಸಿಎಸ್ಐಎಸ್) ಮಹತ್ವದ ಒಪ್ಪಿಗೆಯನ್ನು ನೀಡಿದೆ. ಈ ಭೀಕರ ವಿಮಾನ ದುರಂತದ ಹಿಂದೆ ಕೆನಡಾ ಮೂಲದ ಖಲಿಸ್ತಾನಿ ಉಗ್ರರ ಕೈವಾಡವಿತ್ತು ಎಂದು ಸಂಸ್ಥೆ ಮೊದಲ ಬಾರಿಗೆ ಅಧಿಕೃತವಾಗಿ ಒಪ್ಪಿಕೊಂಡಿದೆ.
ಭಯೋತ್ಪಾದನೆ ಸಂತ್ರಸ್ತರ ರಾಷ್ಟ್ರೀಯ ಸ್ಮರಣ ದಿನದ ಅಂಗವಾಗಿ ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಪ್ರಕಟಿಸಿದ ಸಂದೇಶದಲ್ಲಿ ಸಿಎಸ್ಐಎಸ್, ಈ ಘಟನೆಯನ್ನು “ಕೆನಡಾದ ಇತಿಹಾಸದಲ್ಲೇ ಅತ್ಯಂತ ಭೀಕರ ಭಯೋತ್ಪಾದಕ ದಾಳಿ” ಎಂದು ಬಣ್ಣಿಸಿದೆ.
ಸಂಸ್ಥೆಯ ಹೇಳಿಕೆಯ ಪ್ರಕಾರ, 1985ರ ಜೂನ್ 23ರಂದು ಕೆನಡಾದಲ್ಲೇ ಕಾರ್ಯಾಚರಣೆ ನಡೆಸುತ್ತಿದ್ದ ಖಲಿಸ್ತಾನಿ ಉಗ್ರರು ಇರಿಸಿದ್ದ ಸೂಟ್ಕೇಸ್ ಬಾಂಬ್ ಸ್ಫೋಟಗೊಂಡ ಪರಿಣಾಮ ಏರ್ ಇಂಡಿಯಾ ಫ್ಲೈಟ್ 182 ಪತನಗೊಂಡಿತ್ತು. ಈ ದಾಳಿಯಲ್ಲಿ ವಿಮಾನದಲ್ಲಿದ್ದ ಎಲ್ಲಾ 329 ಪ್ರಯಾಣಿಕರು ಮತ್ತು ಸಿಬ್ಬಂದಿ ಸಾವನ್ನಪ್ಪಿದ್ದರು. ಮೃತರಲ್ಲಿ ಹೆಚ್ಚಿನವರು ಕೆನಡಾ ಪ್ರಜೆಗಳಾಗಿದ್ದರು ಎಂದು ಸಿಎಸ್ಐಎಸ್ ಉಲ್ಲೇಖಿಸಿದೆ.
ಇದೇ ವೇಳೆ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನೆ ಕೂಡ ಸಂತ್ರಸ್ತರಿಗೆ ಗೌರವ ನಮನ ಸಲ್ಲಿಸಿದ್ದು, ಕನಿಷ್ಕ ಬಾಂಬ್ ಸ್ಫೋಟವನ್ನು ದೇಶದ ಇತಿಹಾಸದಲ್ಲೇ ನಡೆದ ಅತ್ಯಂತ ಕ್ರೂರ ಭಯೋತ್ಪಾದಕ ದಾಳಿ ಎಂದು ಬಣ್ಣಿಸಿದ್ದಾರೆ. ಹಿಂಸಾತ್ಮಕ ಉಗ್ರವಾದವನ್ನು ನಿರ್ಮೂಲನೆ ಮಾಡಲು ಕೆನಡಾ ಬದ್ಧವಾಗಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.
1985ರ ಜೂನ್ 23ರಂದು ಮಾಂಟ್ರಿಯಲ್ನಿಂದ ಲಂಡನ್ ಮಾರ್ಗವಾಗಿ ನವದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ಫ್ಲೈಟ್ 182, ಲಂಡನ್ನ ಹೀಥ್ರೂ ವಿಮಾನ ನಿಲ್ದಾಣ ತಲುಪಲು ಸುಮಾರು 45 ನಿಮಿಷಗಳು ಬಾಕಿ ಇರುವಾಗ ಐರ್ಲೆಂಡ್ ಕರಾವಳಿ ಸಮೀಪದ ಅಟ್ಲಾಂಟಿಕ್ ಮಹಾಸಾಗರದ ಮೇಲೆ ಹಾರುತ್ತಿದ್ದ ವೇಳೆ ಸೂಟ್ಕೇಸ್ನಲ್ಲಿದ್ದ ಬಾಂಬ್ ಸ್ಫೋಟಗೊಂಡಿತ್ತು.
ಸ್ಫೋಟದ ತೀವ್ರತೆಗೆ ವಿಮಾನ ಸಮುದ್ರಕ್ಕೆ ಅಪ್ಪಳಿಸಿದ್ದು, ವಿಮಾನದಲ್ಲಿದ್ದ ಎಲ್ಲ 329 ಮಂದಿ ಮೃತಪಟ್ಟಿದ್ದರು. ಮೃತರಲ್ಲಿ 268 ಕೆನಡಾ ಪ್ರಜೆಗಳು, ಅವರಲ್ಲಿ ಹೆಚ್ಚಿನವರು ಭಾರತೀಯ ಮೂಲದವರಾಗಿದ್ದು, 24 ಮಂದಿ ಭಾರತೀಯ ಪ್ರಜೆಗಳೂ ಸೇರಿದ್ದರು. ದುರಂತದ ಬಳಿಕ ಮಹಾಸಾಗರದಿಂದ ಕೇವಲ 131 ಮೃತದೇಹಗಳನ್ನು ಮಾತ್ರ ಪತ್ತೆಹಚ್ಚಲಾಗಿತ್ತು.
1984ರಲ್ಲಿ ಅಮೃತಸರದ ಸ್ವರ್ಣ ಮಂದಿರದಲ್ಲಿ ಅಡಗಿದ್ದ ಸಶಸ್ತ್ರ ಉಗ್ರರನ್ನು ಹೊರಹಾಕಲು ಭಾರತೀಯ ಸೇನೆ ನಡೆಸಿದ್ದ ‘ಆಪರೇಷನ್ ಬ್ಲೂ ಸ್ಟಾರ್’ಗೆ ಪ್ರತೀಕಾರವಾಗಿ ಖಲಿಸ್ತಾನಿ ಉಗ್ರರು ಈ ಸಂಚು ರೂಪಿಸಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ನಾಲ್ಕು ದಶಕಗಳ ಬಳಿಕ ಕೆನಡಾದ ಗುಪ್ತಚರ ಸಂಸ್ಥೆಯ ಈ ಅಧಿಕೃತ ಒಪ್ಪಿಗೆ, ಕನಿಷ್ಕ ವಿಮಾನ ದುರಂತ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ.