ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ಹಿರಿಯ ಶಾಸಕ ಹಾಗೂ ಅನುಭವಿ ರಾಜಕಾರಣಿಯಾಗಿರುವ ಡಾ. ಎಚ್.ಕೆ. ಪಾಟೀಲ ಅವರಿಗೆ ಸಚಿವ ಸಂಪುಟ ವಿಸ್ತರಣೆಯಲ್ಲಿ ಪ್ರಮುಖ ಖಾತೆಯೊಂದಿಗೆ ಸಚಿವ ಸ್ಥಾನ ನೀಡಬೇಕು ಎಂದು ಕಟ್ಟಡ ಕಾರ್ಮಿಕರ ಮಹಾಸಂಘದ ಮಾಜಿ ಅಧ್ಯಕ್ಷ ಹಾಗೂ ಎಐಟಿಸಿಯು ಗದಗ ಜಿಲ್ಲಾಧ್ಯಕ್ಷ, ಕರ್ನಾಟಕ ರಾಜ್ಯ ಉಪಾಧ್ಯಕ್ಷ ಎಂ.ಐ. ನವಲೂರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಎಚ್.ಕೆ. ಪಾಟೀಲ ಅವರು ಹಲವು ದಶಕಗಳಿಂದ ಶಾಸಕರಾಗಿ ನೀರಾವರಿ, ಗ್ರಾಮೀಣಾಭಿವೃದ್ಧಿ, ಪಂಚಾಯತ್ರಾಜ್, ಕಾನೂನು ಹಾಗೂ ಸಂಸದೀಯ ವ್ಯವಹಾರಗಳಂತಹ ಮಹತ್ವದ ಇಲಾಖೆಗಳಲ್ಲಿ ಜನಪರ ಆಡಳಿತ ನೀಡಿರುವ ಅನುಭವಿ ನಾಯಕರು ಎಂದು ಹೇಳಿದ್ದಾರೆ.
ಉತ್ತರ ಕರ್ನಾಟಕದ ಪರ ಧ್ವನಿಯಾಗಿ ರೈತರ ಹಿತಾಸಕ್ತಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ದೀನ ದಲಿತರು, ಅಲ್ಪಸಂಖ್ಯಾತರು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿರುವ ಎಚ್.ಕೆ. ಪಾಟೀಲ ಅವರು ಪ್ರಾಮಾಣಿಕ ಹಾಗೂ ಜನಪರ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಹೀಗಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಚಿವ ಸಂಪುಟ ವಿಸ್ತರಣೆಯಲ್ಲಿ ಎಚ್.ಕೆ. ಪಾಟೀಲ ಅವರಿಗೆ ಪ್ರಮುಖ ಖಾತೆಯೊಂದಿಗೆ ಸಚಿವ ಸ್ಥಾನ ನೀಡಿ, ಉತ್ತರ ಕರ್ನಾಟಕಕ್ಕೆ ಸಮರ್ಪಕ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ನವಲೂರ ಒತ್ತಾಯಿಸಿದ್ದಾರೆ.



