ಧಾರವಾಡ: ಕಳೆದ ಐದು ದಿನಗಳಿಂದ ಮೋಡ ಕವಿದ ವಾತಾವರಣ ಇದ್ದರೂ ಮಳೆ ಸುರಿಯದೆ ಆತಂಕದಲ್ಲಿದ್ದ ಧಾರವಾಡ ಜಿಲ್ಲೆಯ ರೈತರಿಗೆ ಭಾನುವಾರ ಮಧ್ಯಾಹ್ನ ಹಾಗೂ ಸಂಜೆ ಸುರಿದ ಸಾಧಾರಣ ಮಳೆ ಸ್ವಲ್ಪ ಮಟ್ಟಿನ ನೆಮ್ಮದಿ ತಂದಿದೆ.
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದು, ಕೆಲಕಾಲ ಜನಜೀವನ ಅಸ್ತವ್ಯಸ್ತಗೊಂಡಿತು. ಆದರೆ ಈ ಮಳೆಯಿಂದ ರೈತ ಸಮುದಾಯದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ.
ಈಗಾಗಲೇ ಹೊಲಗಳಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಳಿಸಿರುವ ರೈತರು ಮಳೆಗಾಗಿ ಕಾತರದಿಂದ ಕಾಯುತ್ತಿದ್ದರು. ಮಳೆ ವಿಳಂಬವಾದರೆ ಬಿತ್ತಿದ ಬೀಜ ಮೊಳಕೆ ಒಡೆಯದೆ ನಷ್ಟವಾಗುವ ಆತಂಕದಲ್ಲಿದ್ದರು. ಇಂದಿನ ಮಳೆ ಆ ಆತಂಕವನ್ನು ಕೆಲಮಟ್ಟಿಗೆ ಕಡಿಮೆ ಮಾಡಿದೆ.
ಧಾರವಾಡ ಜಿಲ್ಲೆಯಲ್ಲಿ ಈಗಾಗಲೇ ಸುಮಾರು 2 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ ಎಂದು ಅಂದಾಜಿಸಲಾಗಿದೆ. ಮುಂದಿನ ದಿನಗಳಲ್ಲಿ ಸಮಯಕ್ಕೆ ಸರಿಯಾಗಿ ಮಳೆ ಮುಂದುವರಿದರೆ ಉತ್ತಮ ಫಸಲು ಕೈ ಸೇರುವ ನಿರೀಕ್ಷೆಯಿದೆ.
ಸದ್ಯ ಸುರಿದ ಮಳೆಯಿಂದ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ಮುಂದಿನ ಮಳೆಯ ಮೇಲೆ ಕೃಷಿ ಭವಿಷ್ಯ ಅವಲಂಬಿತವಾಗಿದೆ.

