ಬೆಂಗಳೂರು: ರಾಜ್ಯ ಸರ್ಕಾರದ ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆಗೆ ಭಾರೀ ಬದಲಾವಣೆ ತರಲು ಸರ್ಕಾರ ಮುಂದಾಗಿದೆ. ಯೋಜನೆಯ ದುರ್ಬಳಕೆಯನ್ನು ತಡೆಯಲು ರಾಜ್ಯಾದ್ಯಂತ ಮನೆ ಮನೆಗೆ ಹೊಸ ಅರ್ಜಿ ವಿತರಣೆ, ಫಲಾನುಭವಿಗಳ ಮರುಪರಿಶೀಲನೆ ಹಾಗೂ ಡಬಲ್ ಸಂಪರ್ಕ ರದ್ದು ಸೇರಿದಂತೆ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 1.64 ಕೋಟಿ ಜನರು ಗೃಹಜ್ಯೋತಿ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಆದರೆ ಯೋಜನೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಸಂಪೂರ್ಣ ಪರಿಶೀಲನೆ ನಡೆಸಲು ನಿರ್ಧರಿಸಿದೆ ಎಂದರು.
“ಈ ಯೋಜನೆ ಕರ್ನಾಟಕದ ಜನರಿಗಾಗಿ ಮಾತ್ರ. ಹೊರರಾಜ್ಯದವರು ಅಥವಾ ಇಲ್ಲಿನ ಮತದಾರರಲ್ಲದವರು ಗೃಹಜ್ಯೋತಿ ಸೌಲಭ್ಯ ಪಡೆಯಲು ಅವಕಾಶ ಇರುವುದಿಲ್ಲ” ಎಂದು ಸ್ಪಷ್ಟಪಡಿಸಿದ ಡಿಕೆ ಶಿವಕುಮಾರ್, ಒಂದೇ ವ್ಯಕ್ತಿಯ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಉಚಿತ ವಿದ್ಯುತ್ ಸಂಪರ್ಕ ಕಂಡುಬಂದರೆ ಅವುಗಳನ್ನು ತಕ್ಷಣವೇ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹೊಸ ಅರ್ಜಿಗಳನ್ನು ಸರ್ಕಾರ ಮನೆ ಬಾಗಿಲಿಗೆ ತಲುಪಿಸಲಿದ್ದು, ಫಲಾನುಭವಿಯ ಫೋಟೋ, ವಿಳಾಸ ಹಾಗೂ ಇತರೆ ದಾಖಲೆಗಳನ್ನು ಇಂಧನ ಇಲಾಖೆಯ ಸಿಬ್ಬಂದಿ ಸ್ಥಳದಲ್ಲೇ ಪರಿಶೀಲಿಸಲಿದ್ದಾರೆ. ಅರ್ಹರಿಗೆ ಯಾವುದೇ ತೊಂದರೆ ಆಗದಂತೆ ಸಂಪೂರ್ಣ ಪಾರದರ್ಶಕ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದರು.
ಇದೇ ವೇಳೆ, ಐದು ಗ್ಯಾರಂಟಿ ಯೋಜನೆಗಳ ಮೇಲ್ವಿಚಾರಣೆಗೆ ಪಂಚಾಯಿತಿ ಮಟ್ಟದಲ್ಲಿ ವಿಶೇಷ ಸಮಿತಿಗಳನ್ನು ರಚಿಸಿ, ಫಲಾನುಭವಿಗಳ ಅರ್ಹತೆಯನ್ನು ಪರಿಶೀಲಿಸಲು ಪ್ರತ್ಯೇಕ ಅಧಿಕಾರಿಗಳನ್ನು ನೇಮಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಇಂಧನ ಸಚಿವ ಕೆ.ಜೆ. ಜಾರ್ಜ್, ಯೋಜನೆಯನ್ನು ಸರಿಪಡಿಸುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ದುರ್ಬಳಕೆ ತಡೆಯುವ ಕ್ರಮವನ್ನು ರಾಜಕೀಯವಾಗಿ ಟೀಕಿಸುವುದು ಸರಿಯಲ್ಲ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿಯನ್ನು ಅಭಿನಂದಿಸಿದ ಡಿಕೆ ಶಿವಕುಮಾರ್, “ಕರೆಂಟ್ ಒಂದು ನಿಮಿಷ ಹೋದರೂ ಜನ ಮೊದಲು ನನ್ನನ್ನೇ ಬೈಯುತ್ತಾರೆ. ಆದರೆ ನೀವು ಉತ್ತಮ ಸೇವೆ ನೀಡುತ್ತಿದ್ದೀರಿ” ಎಂದು ಹಾಸ್ಯಭರಿತವಾಗಿ ಸಿಬ್ಬಂದಿಯ ಕಾರ್ಯವನ್ನು ಮೆಚ್ಚಿದರು.



