ಕಾರವಾರ: ತುಮಕೂರಿನಲ್ಲಿ ನಾಡಬಾಂಬ್ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪಾಗಲ್ ಪ್ರೇಮಿ ನಾಗೇಂದ್ರ ಪ್ರಕರಣಕ್ಕೆ ಸಂಬಂಧಿಸಿ ಅಂಕೋಲ ಪೊಲೀಸರು ತೀವ್ರ ತನಿಖೆ ಮುಂದುವರಿಸಿದ್ದಾರೆ.
ಈ ಪ್ರಕರಣದಲ್ಲಿ ಇದುವರೆಗೆ 60ಕ್ಕೂ ಹೆಚ್ಚು ಜನರನ್ನು ವಿಚಾರಣೆಗೊಳಪಡಿಸಲಾಗಿದೆ.
ವಿಚಾರಣೆ ವೇಳೆ ಮೂವರನ್ನು ವಶಕ್ಕೆ ಪಡೆಯಲಾಗಿದ್ದು, ಹೊನ್ನಾವರದ ಚಂದಾವರ ಮೂಲದ ಒಬ್ಬ ಹಾಗೂ ಸರಳೆಬೈಲಿನ ಇಬ್ಬರು ಶಂಕಿತರು ಸೇರಿದ್ದಾರೆ. ನಾಗೇಂದ್ರನಿಗೆ ನಾಡಬಾಂಬ್ ತಯಾರಿಸಿ ನೀಡಿರುವ ಶಂಕೆಯ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
ಸ್ನೇಹಿತರು ಹಾಗೂ ಸಂಬಂಧಿಗಳ ವಿಚಾರಣೆ ವೇಳೆ, ನಾಗೇಂದ್ರ ನಾಡಬಾಂಬ್ ಖರೀದಿಸಿದ್ದನ್ನು ದೃಢಪಡಿಸಿರುವ ಮಾಹಿತಿ ಲಭ್ಯವಾಗಿದೆ. ಖರೀದಿ ಸಂದರ್ಭದಲ್ಲಿ ಆತ ಮೊಬೈಲ್ ಬಳಸದೆಯೇ ನೇರವಾಗಿ ಭೇಟಿಯಾಗಿ ವ್ಯವಹಾರ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.
ಅಂಕೋಲ ಠಾಣೆ ಪೊಲೀಸರು ಹಾಗೂ ತುಮಕೂರು ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ತನಿಖೆ ಮುಂದುವರಿದಿದೆ.



