ವಿಜಯಪುರ: ಸಿದ್ದಸಿರಿ ಕೋ-ಆಪರೇಟಿವ್ ಬ್ಯಾಂಕ್ನಲ್ಲಿ ಭಾರೀ ಅಕ್ರಮ ನಡೆದಿದೆ ಮತ್ತು ಠೇವಣಿದಾರರ ಹಣವನ್ನು ಎಥೆನಾಲ್ ಘಟಕಕ್ಕೆ ಬಳಸಲಾಗಿದೆ ಎಂಬ ಆರೋಪಗಳ ಬೆನ್ನಲ್ಲೇ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟನೆ ನೀಡಿದ್ದಾರೆ.
ಬ್ಯಾಂಕ್ ಸುಭದ್ರವಾಗಿದ್ದು, ಯಾವುದೇ ಅವ್ಯವಹಾರ ನಡೆದಿಲ್ಲ. ಠೇವಣಿದಾರರು ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ. ಸಿದ್ದಸಿರಿ ಮಲ್ಟಿಸ್ಟೇಟ್ ಮಲ್ಟಿ ಪರ್ಪಸ್ ಕೋ-ಆಪರೇಟಿವ್ ಸೊಸೈಟಿಯ ಹಣಕಾಸಿನ ವ್ಯವಹಾರಗಳ ಕುರಿತು ಕೇಳಿಬಂದಿರುವ ಆರೋಪಗಳಿಗೆ ಸಂಬಂಧಿಸಿದಂತೆ ಯತ್ನಾಳ್ ವಿಡಿಯೋ ಮೂಲಕ ಬ್ಯಾಂಕ್ನ ಠೇವಣಿದಾರರು ಹಾಗೂ ಗ್ರಾಹಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಕಳೆದ ಒಂದು ವಾರದಿಂದ ಕೆಲ ದುಷ್ಟಶಕ್ತಿಗಳು ಸಿದ್ದಸಿರಿ ಸಂಸ್ಥೆಯ ವಿರುದ್ಧ ಷಡ್ಯಂತ್ರ ನಡೆಸುತ್ತಿವೆ ಎಂದು ಆರೋಪಿಸಿರುವ ಅವರು, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಸಂಸ್ಥೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಸುಮಾರು 6 ಸಾವಿರ ಕೋಟಿ ರೂ. ಠೇವಣಿ ಸಂಗ್ರಹಿಸುವ ಮೂಲಕ ಷೇರುದಾರರು ಹಾಗೂ ಠೇವಣಿದಾರರ ವಿಶ್ವಾಸ ಗಳಿಸಿದೆ ಎಂದು ತಿಳಿಸಿದ್ದಾರೆ.
‘ಯಾವುದೇ ಅವ್ಯವಹಾರ ನಡೆದಿಲ್ಲ’;
ಸಿದ್ದಸಿರಿಯನ್ನು ರಾಜ್ಯದ ನಂಬರ್ ಒನ್ ಸಂಸ್ಥೆಯನ್ನಾಗಿ ಬೆಳೆಸಿದ್ದೇವೆ. ಇದಕ್ಕೆ ಗ್ರಾಹಕರ ಆಶೀರ್ವಾದ ಮತ್ತು ಸಿಬ್ಬಂದಿಯ ಪರಿಶ್ರಮವೇ ಕಾರಣ. ಸಂಸ್ಥೆಯಲ್ಲಿ ಯಾವುದೇ ಗೊಂದಲಗಳಿಲ್ಲ. ಯಾವುದೇ ಅವ್ಯವಹಾರ ನಡೆದಿಲ್ಲ ಹಾಗೂ ಅಭದ್ರಿತ ಸಾಲಗಳನ್ನು ನೀಡಿಲ್ಲ ಎಂದು ಯತ್ನಾಳ್ ಸ್ಪಷ್ಟಪಡಿಸಿದ್ದಾರೆ.
ಸಂಸ್ಥೆಯು ಎಲ್ಲ ಸಾಲಗಳಿಗೂ ಸೂಕ್ತ ಭದ್ರತೆ ಪಡೆದುಕೊಂಡಿದೆ. ಸುಮಾರು 2 ಸಾವಿರ ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಹೊಂದಿದ್ದು, ಸುರಕ್ಷಿತ ಆಸ್ತಿಗಳನ್ನು ಆಧಾರವಾಗಿಟ್ಟುಕೊಂಡೇ ಸಾಲ ನೀಡಲಾಗಿದೆ ಎಂದು ಹೇಳಿದ್ದಾರೆ.
ಠೇವಣಿದಾರರಿಗೆ ಅಭಯ ನೀಡಿದ ಶಾಸಕ;
ಬ್ಯಾಂಕ್ನ ಹಣಕಾಸಿನ ಸ್ಥಿತಿಗತಿ ಕುರಿತು ಆತಂಕಪಡುವ ಅಗತ್ಯವಿಲ್ಲ. ಗ್ರಾಹಕರು ತಮ್ಮ ವಿಶ್ವಾಸವನ್ನು ಮುಂದುವರಿಸಬೇಕು. ನಿಮ್ಮ ಪ್ರೀತಿ ಮತ್ತು ಆಶೀರ್ವಾದದೊಂದಿಗೆ ಭವಿಷ್ಯದಲ್ಲಿಯೂ ನಮ್ಮೊಂದಿಗೆ ಇರಬೇಕು. ಯಾವುದೇ ತೊಂದರೆಯಾಗುವುದಿಲ್ಲ ಎಂದು ಯತ್ನಾಳ್ ಠೇವಣಿದಾರರು ಹಾಗೂ ಗ್ರಾಹಕರಿಗೆ ಭರವಸೆ ನೀಡಿದ್ದಾರೆ.
ಠೇವಣಿದಾರರ ಹಣವನ್ನು ಚಿಂಚೋಳಿಯ ಎಥೆನಾಲ್ ಘಟಕಕ್ಕೆ ಬಳಸಲಾಗಿದೆ ಎಂಬ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಯತ್ನಾಳ್ ಅವರ ಈ ಸ್ಪಷ್ಟನೆ ಮಹತ್ವ ಪಡೆದುಕೊಂಡಿದೆ.







