ಚಿಕ್ಕಬಳ್ಳಾಪುರ: ನಗರದ ಪಶುವೈದ್ಯ ಇಲಾಖೆ ಕಚೇರಿ ಸಮೀಪದ ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದ ಬಳಿಕ ಹೃದಯವಿದ್ರಾವಕ ಘಟನೆ ನಡೆದಿದೆ. ಅಂಗಡಿಯಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ಸ್ಥಳೀಯರ ನೆರವಿನಿಂದ ನಂದಿಸಿದ ಮಾಲೀಕ ವೆಂಕಟೇಶ್ (55) ಅವರು ತೀವ್ರ ಮಾನಸಿಕ ಆಘಾತದಿಂದ ಹೃದಯಾಘಾತಕ್ಕೊಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಣಜೇನಹಳ್ಳಿ ನಿವಾಸಿಯಾಗಿದ್ದ ವೆಂಕಟೇಶ್ ಹಲವು ವರ್ಷಗಳಿಂದ ನಂದಿನಿ ಮಿಲ್ಕ್ ಪಾರ್ಲರ್ ನಡೆಸುತ್ತಿದ್ದರು. ಸೋಮವಾರ ರಾತ್ರಿ ಸುಮಾರು 11 ಗಂಟೆ ಸುಮಾರಿಗೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಮಾಹಿತಿ ತಿಳಿಯುತ್ತಿದ್ದಂತೆ ಅವರು ತಕ್ಷಣ ಸ್ಥಳಕ್ಕೆ ಧಾವಿಸಿದ್ದರು. ಸ್ಥಳೀಯರೊಂದಿಗೆ ಸೇರಿ ಬೆಂಕಿಯನ್ನು ಯಶಸ್ವಿಯಾಗಿ ನಿಯಂತ್ರಣಕ್ಕೆ ತಂದಿದ್ದರು.
ಆದರೆ ಬೆಂಕಿ ಆರಿಸಿದ ಕೆಲವೇ ಕ್ಷಣಗಳಲ್ಲಿ ಅಂಗಡಿ ಎದುರೇ ಅವರು ಕುಸಿದು ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದರೂ, ವೈದ್ಯರು ಅವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಘಟನೆಯಿಂದ ಕುಟುಂಬಸ್ಥರು ಹಾಗೂ ಸ್ಥಳೀಯರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಮಿಲ್ಕ್ ಪಾರ್ಲರ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು ಎಂಬುದರ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಅಗ್ನಿ ಅವಘಡದ ಮೂಲವನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ.



