ವಿಜಯಸಾಕ್ಷಿ ಸುದ್ದಿ, ಮುಂಡರಗಿ:
ಗಂಡ-ಹೆಂಡತಿ ಮಧ್ಯೆದ ಜಗಳ ನ್ಯಾಯ ಹೇಳಲು ಹೋದ ತಾಂಡಾದ ಮುಖಂಡನ ಕೊಲೆಯಲ್ಲಿ ಅಂತ್ಯಗೊಂಡಿರುವ ಧಾರುಣ ಘಟನೆ ಶುಕ್ರವಾರ ಮುಂಡರಗಿ ತಾಲೂಕಿನ ಅತ್ತಿಕಟ್ಟಿ ತಾಂಡಾದಲ್ಲಿ ನಡೆದಿದೆ.

ಹೌದು, ರಾಜೀ ಪಂಚಾಯತಿ ಮಾಡಿ ನನಗೆ ನ್ಯಾಯ ಒದಗಿಸಿ ಕೊಡಲಿಲ್ಲವೆಂದು ಕೋಪಗೊಂಡ
ವಿಷ್ಣು ರೂಪಲಪ್ಪ ಪವಾರ(35) ಎಂಬ ವ್ಯಕ್ತಿ ಗಂಡ-ಹೆಂಡತಿ ನಡುವಿನ ಜಗಳ ಬಗೆಹರಿಸಲು ಮಧ್ಯಸ್ಥಿಕೆ ವಹಿಸಿದ್ದ ತಾಂಡಾದ ಮುಖಂಡನಿಗೆ ಚಾಕು ಇರಿದು ಕೊಲೆ ಮಾಡಿದ್ದಾನೆ.
ಅತ್ತಿಕಟ್ಟಿ ತಾಂಡಾದ ಸೋಮಲಪ್ಪ ನಾಯಕ್(50) ಎಂಬ ವ್ಯಕ್ತಿಯ ದಾರುಣವಾಗಿ ಕೊಲೆಗೀಡಾದ ಮುಖಂಡ. ಹೊಟ್ಟೆ, ಎದೆ ಹಾಗೂ ಗಂಟಲು ಭಾಗಕ್ಕೆ ಬಲವಾಗಿ ಚಾಕು ಇರಿದ ಪರಿಣಾಮ ಸೋಮಲಪ್ಪ ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದು, ವಿಷ್ಣು ಸ್ವತಃ ತಾನೇ ಹೋಗಿ ಪೊಲೀಸರಿಗೆ ಶರಣಾಗಿದ್ದಾನೆ.
ಘಟನೆ ವಿವರ:
ಕಳೆದ ನಾಲ್ಕೈದು ವರ್ಷಗಳಿಂದ ವಿಷ್ಣು ಪವಾರ ಮತ್ತು ಆತನ ಹೆಂಡತಿ ಸುಮಿತ್ರಾ ಇಬ್ಬರು ಮಧ್ಯೆ ಜಗಳ ಬಂದಿತ್ತು. ವಿಷ್ಣು ತನ್ನ ಹೆಂಡತಿಯ ಮೇಲೆ ಸಂಶಯ ಮಾಡುತ್ತಿದ್ದನಂತೆ. ಸಂಶಯ ಸಂಸಾರ ಹಾಳು ಮಾಡಿತು ಎಂಬಂತೆ ಪತಿಯ ಈ ನಡೆಯಿಂದ ಬೇಸತ್ತಿದ್ದ ಸುಮಿತ್ರಾ ತಾಂಡಾ ಬಿಟ್ಟು ಹೋಗಿದ್ದಳಂತೆ. ನಾಲ್ಕು ಮಕ್ಕಳ ತುಂಬು ಸಂಸಾರ ಬಿಟ್ಟು ಸುಮಿತ್ರಾ ತವರು ಮನೆಯಲ್ಲೇ ಇದ್ದಳಂತೆ.
ಇನ್ನು ರಾಜೀ ಪಂಚಾಯತಿ ಮಾಡಿ ಗಂಡ ಹೆಂಡತಿಯನ್ನು ಒಂದು ಮಾಡಲು ತಾಂಡಾದ ಮುಖಂಡರು ಮುಂದಾಗಿದ್ದರು. ಆದರೆ, ಸುಮಿತ್ರಾ ಊರ ಜನರ ಮಾತು ಕೇಳದೆ ತವರು ಮನೆಯಲ್ಲೇ ಉಳಿದಿದ್ದಳು. ಇದರಿಂದ ತಾಂಡಾದ ಮುಖಂಡರು ಸರಿಯಾಗಿ ರಾಜೀ ಪಂಚಾಯತಿ ಮಾಡಿಲ್ಲವೆಂದು ವಿಷ್ಣು ಸಿಟ್ಟು ಮಾಡಿಕೊಂಡಿದ್ದನಂತೆ. ನಿನ್ನೆ (ಶುಕ್ರವಾರ) ಗ್ರಾಮದ ಸೇವಲಾಲ್ ಉತ್ಸವದ ಕುರಿತು ಚರ್ಚಿಸಲು ಕಾರುಬಾರಿ, ನಾಯಕರುಗಳು ಸಭೆ ಸೇರಿದ್ದರು. ಈ ವೇಳೆ ಏಕಾಏಕಿ ಗಲಾಟೆ ಎಬ್ಬಿಸಿದ ವಿಷ್ಣು ಪವಾರ ತಾಂಡಾದ ನಾಯಕ ಸೋಮಲಪ್ಪನನ್ನು ಕೊಲೆ ಮಾಡಿ ಸ್ವತಃ ತಾನೇ ಹೋಗಿ ಪೊಲೀಸರಿಗೆ ಶರಣಾಗಿದ್ದು, ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಘಟನೆಯ ನಂತರ ತಾಂಡಾದ ಜನರು ಆರೋಪಿ ವಿಷ್ಣುಗೆ ಕಠಿಣ ಶಿಕ್ಷೆ ನೀಡಲು ಒತ್ತಾಯಿಸಿ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿಯ ಮುಂದೆ ಪ್ರತಿಭಟನೆ ನಡೆಸಿದರು.