ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ವಿದ್ಯಾರ್ಥಿಗಳ ಜ್ಞಾನಮಟ್ಟವನ್ನು ವಿಶ್ವದರ್ಜೆಗೆ ಹೆಚ್ಚಿಸುವ ಉದ್ದೇಶದಿಂದ ನಾರ್ತ್ಸೌತ್ ಫೌಂಡೇಶನ್ನ ಸ್ಕೂಲ್ ರಿಲೇಶನ್ಸ್ ಹಾಗೂ ಡೇಟಾ ಅನಾಲಿಟಿಕ್ಸ್ ಮ್ಯಾನೇಜರ್ ಕೃಪಕರ್ ಪೂಟ್ಲಪಲ್ಲಿ ಅವರು ಸೋಮವಾರ ಲಕ್ಷ್ಮೇಶ್ವರದ ಪ್ರತಿಷ್ಠಿತ ಸ್ಕೂಲ್ ಚಂದನಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಶಾಲೆಯ ಸಿ.ಎನ್.ಆರ್. ರಾವ್ ಹಾಲ್ ಆಫ್ ಸೈನ್ಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಮಹತ್ವ, ವಿದ್ಯಾರ್ಥಿಗಳ ಸಾಮರ್ಥ್ಯ ವೃದ್ಧಿ ಹಾಗೂ ಜ್ಞಾನಮಟ್ಟವನ್ನು ಹೆಚ್ಚಿಸಿಕೊಳ್ಳುವ ಕುರಿತು ಮಾಹಿತಿ ನೀಡಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ತಂತ್ರಜ್ಞಾನ ಕೌಶಲ್ಯ, ಮೂಲಭೂತ ಇಂಗ್ಲಿಷ್ ಮತ್ತು ಗಣಿತ ಜ್ಞಾನ ಅತ್ಯಗತ್ಯವಾಗಿದೆ. ಬಾಯಿಪಾಠಕ್ಕೆ ಸೀಮಿತವಾಗದೆ ವಿಷಯವನ್ನು ಅರ್ಥೈಸಿಕೊಂಡು ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ವಿದೇಶಗಳಲ್ಲಿನ ಶಿಕ್ಷಣ ವ್ಯವಸ್ಥೆ, ಉನ್ನತ ಶಿಕ್ಷಣದ ಅವಕಾಶಗಳು ಹಾಗೂ ಭವಿಷ್ಯದ ಕೌಶಲ್ಯಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಆತ್ಮವಿಶ್ವಾಸದಿಂದ ಗುರಿ ಸಾಧಿಸುವಂತೆ ಪ್ರೇರೇಪಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಸಂಸ್ಥಾಪಕರು, ಪ್ರಾಂಶುಪಾಲರು, ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



