ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸೋಮವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಯೋಜನೆಗಳ ಪ್ರಗತಿ ಹಾಗೂ ಕೇಂದ್ರ-ರಾಜ್ಯ ಸಹಭಾಗಿತ್ವದ ಯೋಜನೆಗಳಿಗೆ ಹೆಚ್ಚಿನ ಬೆಂಬಲ ನೀಡುವಂತೆ ಪ್ರಧಾನಿಗೆ ಮನವಿ ಮಾಡಿರುವುದಾಗಿ ಫಡ್ನವೀಸ್ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರೊಂದಿಗಿನ ಭೇಟಿಯ ವಿವರಗಳನ್ನು ಫಡ್ನವೀಸ್ ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಹಾರಾಷ್ಟ್ರದ ಅಭಿವೃದ್ಧಿಗೆ ಪ್ರಧಾನಮಂತ್ರಿಯವರ ಮಾರ್ಗದರ್ಶನ ಅತ್ಯಂತ ಮಹತ್ವದ್ದಾಗಿದೆ. ಅವರ ಮಾರ್ಗದರ್ಶನ ಹಾಗೂ ರಾಜ್ಯಕ್ಕೆ ನೀಡುತ್ತಿರುವ ಬೆಂಬಲಕ್ಕಾಗಿ ಕೃತಜ್ಞನಾಗಿದ್ದೇನೆ ಎಂದು ಫಡ್ನವೀಸ್ ತಿಳಿಸಿದ್ದಾರೆ.
ಪ್ರಧಾನಿಯವರೊಂದಿಗಿನ ಭೇಟಿ ತಮಗೆ ಸಕಾರಾತ್ಮಕ ಶಕ್ತಿಯನ್ನು ನೀಡಿದೆ. ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ವಿಚಾರಗಳ ಕುರಿತು ಪ್ರಧಾನಿಯವರೊಂದಿಗೆ ಚರ್ಚೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಮಹಾರಾಷ್ಟ್ರದ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರದಿಂದ ಮತ್ತಷ್ಟು ಸಹಕಾರ ದೊರೆಯುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ನಿರ್ಮಲಾ ಸೀತಾರಾಮನ್ ಜೊತೆಗೂ ಮಾತುಕತೆ
ಇದೇ ವೇಳೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕೂಡ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಮುಂಬೈ-ವಧವನ್ ಎಕ್ಸ್‌ಪ್ರೆಸ್‌ವೇ ಸಂಪರ್ಕ ಯೋಜನೆಯ ಭಾಗವಾಗಿರುವ ಉತ್ತನ್-ವಿರಾರ್ ಸಮುದ್ರ ಸೇತುವೆ ನಿರ್ಮಾಣಕ್ಕೆ ಜಪಾನ್ ಇಂಟರ್‌ನ್ಯಾಷನಲ್ ಕೋಆಪರೇಷನ್ ಏಜೆನ್ಸಿ (JICA)ಯಿಂದ ಹಣಕಾಸು ನೆರವು ಪಡೆಯಲು ಅನುಮೋದನೆ ನೀಡುವಂತೆ ಫಡ್ನವೀಸ್ ಮನವಿ ಸಲ್ಲಿಸಿದ್ದಾರೆ.
ಈ ಮನವಿಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಫಡ್ನವೀಸ್ ತಿಳಿಸಿದ್ದಾರೆ. ದೆಹಲಿಯಲ್ಲಿನ ಪ್ರಧಾನಿ ಮೋದಿ ಹಾಗೂ ನಿರ್ಮಲಾ ಸೀತಾರಾಮನ್ ಅವರೊಂದಿಗಿನ ಭೇಟಿಯ ಬಳಿಕ ಮುಖ್ಯಮಂತ್ರಿ ಫಡ್ನವೀಸ್ ಮುಂಬೈಗೆ ವಾಪಸಾಗಲಿದ್ದಾರೆ. ಮಂಗಳವಾರ ಮುಂಬೈನ ‘ದಿ ಲಲಿತ್’ ಹೋಟೆಲ್‌ನಲ್ಲಿ ಇಂಡೋ-ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿರುವ 2026ರ ರಾಷ್ಟ್ರೀಯ ಸಮಾವೇಶವನ್ನು ಅವರು ಉದ್ಘಾಟಿಸಿ ಮಾತನಾಡಲಿದ್ದಾರೆ.



