ನವದೆಹಲಿ: ಮಹಾತ್ಮ ಗಾಂಧೀಜಿಯವರ 157ನೇ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ದೆಹಲಿಯ ರಾಜ್ಘಾಟ್ಗೆ ತೆರಳಿ ಗೌರವ ನಮನ ಸಲ್ಲಿಸಿದರು. ಬಳಿಕ ಸರ್ವಧರ್ಮ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ದೇಶಾದ್ಯಂತ ನಾಯಕರು ಹಾಗೂ ನಾಗರಿಕರು ಮಹಾತ್ಮ ಗಾಂಧೀಜಿಯವರನ್ನು ಸ್ಮರಿಸಿದರು. ಗಾಂಧೀಜಿಯವರ ಶಾಂತಿ ಮತ್ತು ಅಹಿಂಸೆಯ ಸಂದೇಶವನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲಾಯಿತು.
ರಾಜ್ಘಾಟ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಗಾಂಧೀಜಿಗೆ ಗೌರವ ಸಲ್ಲಿಸಿದರು. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸೇರಿದಂತೆ ಹಲವು ಗಣ್ಯರೂ ರಾಜ್ಘಾಟ್ನಲ್ಲಿ ಪುಷ್ಪ ನಮನ ಸಲ್ಲಿಸಿದರು.
ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಅಂಗವಾಗಿ ವಿಜಯ್ ಘಾಟ್ಗೆ ತೆರಳಿ ಗೌರವ ನಮನ ಸಲ್ಲಿಸಿದರು. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನವೂ ಅಕ್ಟೋಬರ್ 2ರಂದು ಆಚರಿಸಲಾಗುತ್ತದೆ.
ಇನ್ನು ಗಾಂಧಿ ಜಯಂತಿಯ ಮುನ್ನಾದಿನದಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಹಾತ್ಮ ಗಾಂಧೀಜಿಗೆ ಗೌರವ ಸಲ್ಲಿಸಿದ್ದರು. ಜಾಗತಿಕವಾಗಿ ಸಂಘರ್ಷದ ವಾತಾವರಣವಿರುವ ಸಂದರ್ಭದಲ್ಲಿ ಗಾಂಧೀಜಿಯವರ ಶಾಂತಿ ಮತ್ತು ಅಹಿಂಸೆಯ ಸಂದೇಶ ಮತ್ತಷ್ಟು ಪ್ರಸ್ತುತವಾಗಿದೆ ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.



