ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಮತ್ತೆ ಸುದ್ದಿಯಲ್ಲಿದೆ. ಜೈಲಿನಲ್ಲಿರುವ ವಿಐಪಿ ಕೈದಿಗಳ ವಿಚಾರವಾಗಿ ಆಗಾಗ್ಗೆ ಸುದ್ದಿಯಾಗುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಂದು ಮೊಬೈಲ್ ಫೋನ್ ಪತ್ತೆಯಾಗಿರುವುದು ಕಾರಾಗೃಹ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ.
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೈಲಿನಲ್ಲಿದ್ದಾಗ ಮೊಬೈಲ್ ಹಾಗೂ ಪೆನ್ಡ್ರೈವ್ ಹೊಂದಿದ್ದ ಪ್ರಕರಣದ ಬೆನ್ನಲ್ಲೇ ಮತ್ತೊಂದು ಮೊಬೈಲ್ ಪತ್ತೆಯಾಗಿದೆ. ಇತ್ತೀಚೆಗೆ ಸಿಸಿಬಿ ಅಧಿಕಾರಿಗಳು ನಡೆಸಿದ ದಾಳಿ ವೇಳೆ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆಯಾಗಿತ್ತು ಎನ್ನಲಾಗಿದೆ.
ಇದರ ಬೆನ್ನಲ್ಲೇ ಅದೇ ದಿನ ಜೈಲು ಅಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ತಪಾಸಣೆ ನಡೆಸಿದ ವೇಳೆ ಮತ್ತೊಂದು ಮೊಬೈಲ್ ಫೋನ್ ಪತ್ತೆಯಾಗಿದೆ. ಜೈಲಿನಲ್ಲಿದ್ದ ದೇವರ ಫೋಟೋವೊಂದರ ಹಿಂದೆ ವಿವೋ ಕಂಪನಿಯ ಮೊಬೈಲ್ ಇರಿಸಿರುವುದು ಪತ್ತೆಯಾಗಿದೆ.
ಪತ್ತೆಯಾದ ಮೊಬೈಲ್ನಲ್ಲಿ ಸಿಮ್ ಇರಲಿಲ್ಲ ಹಾಗೂ ಅದು ಸ್ವಿಚ್ ಆಫ್ ಆಗಿತ್ತು ಎನ್ನಲಾಗಿದೆ. ಮೊಬೈಲ್ ಫೋನ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಇದನ್ನು ಯಾರು ಬಳಸುತ್ತಿದ್ದರು ಎಂಬ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಜೈಲಿನೊಳಗೆ ಮೊಬೈಲ್ ಹೇಗೆ ಪ್ರವೇಶಿಸಿತು, ಅದನ್ನು ಯಾರು ಬಳಸುತ್ತಿದ್ದರು ಹಾಗೂ ಇದರ ಹಿಂದೆ ಯಾರಾದರೂ ಇದ್ದಾರೆಯೇ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



