ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ತಾಲೂಕಿನ ಹಂಪಾಪಟ್ಟಣದಲ್ಲಿ ಕಾರು ಹುಣ್ಣಿಮೆ ಅಂಗವಾಗಿ ಗ್ರಾಮೀಣ ಸಂಸ್ಕೃತಿ ಹಾಗೂ ಕೃಷಿ ಪರಂಪರೆಯ ಪ್ರತೀಕವಾಗಿರುವ ಸಾಂಪ್ರದಾಯಿಕ ಹೋರಿಕರ ಎತ್ತುಗಳ ಓಟದ ಸ್ಪರ್ಧೆ ಅದ್ಧೂರಿಯಾಗಿ ನಡೆಯಿತು.
ಸ್ಪರ್ಧೆಯಲ್ಲಿ 100ಕ್ಕೂ ಹೆಚ್ಚು ರೈತರು ತಮ್ಮ ಹೋರಿಕರೊಂದಿಗೆ ಭಾಗವಹಿಸಿದ್ದರು. ಸುಮಾರು 500 ಮೀಟರ್ ದೂರದ ಓಟದಲ್ಲಿ ಹೋರಿಕರು ತಮ್ಮ ವೇಗ, ಸಾಮರ್ಥ್ಯ ಹಾಗೂ ತರಬೇತಿಯನ್ನು ಪ್ರದರ್ಶಿಸಿ ನೆರೆದಿದ್ದ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.
ಸ್ಪರ್ಧೆಯಲ್ಲಿ ಚಿಂತಪಳ್ಳಿ ಪಾಂಡು ಅವರ ಹೋರಿಕರ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದುಕೊಂಡಿತು.
ಈ ಸಂದರ್ಭದಲ್ಲಿ ಕಾಳೇ ವಾದನ ಹೇಮಣ್ಣ, ಬಾರಿಕರ್ ಗಂಗಪ್ಪ, ತಳವಾರ್ ಹುಲುಗಪ್ಪ, ಚಿಂತಪಳ್ಳಿ ಬಸಪ್ಪ, ಎನ್. ನಾಗರಾಜ್, ಬಿ. ನಾಗರಾಜ್, ವಿಎಸ್‌ಎಸ್‌ಎನ್ ಅಧ್ಯಕ್ಷ ಹುಲುಗಪ್ಪ ಹಾಗೂ ಎಚ್. ಭೀಮಪ್ಪ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಸ್ಪರ್ಧೆಯನ್ನು ವೀಕ್ಷಿಸಲು ಹಂಪಾಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು, ಯುವಕರು ಹಾಗೂ ಸಾರ್ವಜನಿಕರು ಆಗಮಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.
ದೇಶೀ ಹೋರಿಕರ ಸಂರಕ್ಷಣೆ, ರೈತರಲ್ಲಿ ಬಾಂಧವ್ಯ ವೃದ್ಧಿ ಹಾಗೂ ಗ್ರಾಮೀಣ ಕ್ರೀಡೆ ಮತ್ತು ಕೃಷಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕಾರು ಹುಣ್ಣಿಮೆ ಅಂಗವಾಗಿ ಈ ಸ್ಪರ್ಧೆಯನ್ನು ಪ್ರತಿವರ್ಷ ಆಯೋಜಿಸಲಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದರು.



