HomeGadag Newsಆಶ್ರಮದ ಪಾವಿತ್ರ್ಯಕ್ಕೆ ಧಕ್ಕೆ ಬಂದರೆ ಸುಮ್ಮನಿರುವುದಿಲ್ಲ: ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು

ಆಶ್ರಮದ ಪಾವಿತ್ರ್ಯಕ್ಕೆ ಧಕ್ಕೆ ಬಂದರೆ ಸುಮ್ಮನಿರುವುದಿಲ್ಲ: ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ವೀರೇಶ್ವರ ಪುಣ್ಯಾಶ್ರಮವು ತ್ರಿಕಾಲಜ್ಞಾನಿ ಹಾನಗಲ್ ಕುಮಾರೇಶ್ವರರ ಕನಸಿನ ಕೂಸಾಗಿದ್ದು, ಅದರ ಪಾವಿತ್ರ್ಯ, ಪರಂಪರೆ ಮತ್ತು ಮೂಲ ತತ್ವಗಳಿಗೆ ಯಾವುದೇ ಧಕ್ಕೆ ಬರದಂತೆ ಎಲ್ಲರೂ ಜಾಗರೂಕರಾಗಬೇಕು ಎಂದು ಶಿರಹಟ್ಟಿಯ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಹೇಳಿದರು.

ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ನಡೆದ ಉಭಯ ಶ್ರೀಗಳ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಕೀರ್ತನ ಸಮ್ಮೇಳನ ಹಾಗೂ ಅಂಧರ ಗೋಷ್ಠಿಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಆಶ್ರಮವು ಎಲ್ಲರಿಗೂ ತಾಯಿಯಂತಿದ್ದು, ಅದರ ಮೇಲೆ ಯಾರೇ ಕಣ್ಣು ಹಾಕಿದರೂ ಸಹಿಸುವ ಪ್ರಶ್ನೆಯೇ ಇಲ್ಲ. ಆಶ್ರಮದ ರಕ್ಷಣೆ ಮತ್ತು ಪಾವಿತ್ರ್ಯ ಕಾಪಾಡುವುದು ಪ್ರತಿಯೊಬ್ಬ ಭಕ್ತನ ಜವಾಬ್ದಾರಿ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ರಾಜ್ಯದ ಅನೇಕ ಧಾರ್ಮಿಕ ಸಂಸ್ಥೆಗಳು ಮತ್ತು ಗೌರವಾನ್ವಿತ ಸ್ಥಾನಗಳು ವಿವಾದಕ್ಕೆ ಒಳಗಾಗುತ್ತಿರುವುದು ವಿಷಾದನೀಯ. ಆದರೆ ಸತ್ಯ ಎಲ್ಲರಿಗೂ ಗೊತ್ತಿದ್ದರೂ ಪ್ರತಿಕ್ರಿಯಿಸುವ ಸಮಯ ಇನ್ನೂ ಬಂದಿಲ್ಲ. ಆಶ್ರಮದ ಕಲಾವಿದರು, ಭಕ್ತರು ಹಾಗೂ ಆಡಳಿತ ಮಂಡಳಿ ತಾಳ್ಮೆ ಕಾಪಾಡಿಕೊಂಡರೆ ಎಲ್ಲ ಸಮಸ್ಯೆಗಳಿಗೂ ಸೂಕ್ತ ಪರಿಹಾರ ಸಿಗಲಿದೆ ಎಂದು ಹೇಳಿದರು.

ಯಾರಾದರೂ ಆಶ್ರಮದ ಸಮಸ್ಯೆ ಬಗೆಹರಿಸುವ ನೆಪದಲ್ಲಿ ಪ್ರವೇಶಿಸಲು ಯತ್ನಿಸಿದರೆ ಎಚ್ಚರಿಕೆಯಿಂದಿರಬೇಕು. ಕಾಣದ ಕೈಗಳು ಕೆಲವೊಮ್ಮೆ ಧಾರ್ಮಿಕ ಸಂಸ್ಥೆಗಳನ್ನೇ ಗುರಿಯಾಗಿಸುತ್ತವೆ. ಪುಣ್ಯಕ್ಷೇತ್ರದೊಳಗೆ ಪ್ರವೇಶಿಸುವಾಗ ಪಾದರಕ್ಷೆಗಳಷ್ಟೇ ಅಲ್ಲ, ಜಾತಿ ಮತ್ತು ರಾಜಕಾರಣವನ್ನೂ ಹೊರಗಿಟ್ಟು ಬರಬೇಕು ಎಂದು ಕಿವಿಮಾತು ಹೇಳಿದರು.

ಪಂಚಾಕ್ಷರಿ ಗವಾಯಿಗಳು ಮತ್ತು ಪುಟ್ಟರಾಜ ಗವಾಯಿಗಳು ರಾಜಕಾರಣ ಹಾಗೂ ಜಾತೀಯತೆಯಿಂದ ದೂರವಿದ್ದು ಸಂಗೀತ, ಸಾಹಿತ್ಯ, ಕಲೆ ಮತ್ತು ಸೇವೆಯ ಮೂಲಕ ಆಶ್ರಮವನ್ನು ಬೆಳೆಸಿದರು. ಆ ಪರಂಪರೆಯೇ ಮುಂದುವರಿಯಬೇಕು. ಆಶ್ರಮದಲ್ಲಿ ಕಲಾವಿದರು, ಸಂಗೀತಗಾರರು, ಪ್ರವಚನಕಾರರು ಹಾಗೂ ಸಾಹಿತ್ಯ ಸೇವಕರನ್ನು ರೂಪಿಸುವುದೇ ಮುಖ್ಯ ಉದ್ದೇಶವಾಗಿದ್ದು, ಇಲ್ಲಿ ಯಾವುದೇ ರೀತಿಯ ರಾಜಕೀಯ ಅಥವಾ ಜಾತಿ ಪ್ರಭಾವಕ್ಕೆ ಅವಕಾಶ ಇರಬಾರದು ಎಂದು ಹೇಳಿದರು.

ಆಶ್ರಮದ ರಕ್ಷಣೆಗೆ ಎಲ್ಲರೂ ಒಂದಾಗಬೇಕು. ಇಲ್ಲಿ ವ್ಯಕ್ತಿಗಳಿಗಿಂತ ವ್ಯವಸ್ಥೆ, ಪರಂಪರೆ ಮತ್ತು ಮೌಲ್ಯಗಳು ಮುಖ್ಯ. ಕಾಲ ಬದಲಾದರೂ ಆಶ್ರಮದ ಮೂಲ ಸ್ವರೂಪ ಬದಲಾಗಬಾರದು. ಮಾಧ್ಯಮಗಳ ಮುಂದೆ ಅನಗತ್ಯ ಹೇಳಿಕೆಗಳನ್ನು ನೀಡುವುದನ್ನು ತಪ್ಪಿಸಿ, ತಾಳ್ಮೆಯಿಂದ ನಡೆದುಕೊಳ್ಳುವುದು ಒಳಿತು ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗದುಗಿನ ಶಿವಾನಂದ ಬ್ರಹ್ಮಮಠದ ಜಗದ್ಗುರು ಅಭಿನವ ಶಿವಾನಂದ ಮಹಾಸ್ವಾಮಿಗಳು ವಹಿಸಿದ್ದರು. ಯಲಬುರ್ಗಾದ ಬಸವಲಿಂಗೇಶ್ವರ ಶಿವಾಚಾರ್ಯರು, ಗುಳೇದಗುಡ್ಡದ ಅಭಿನವ ಒಪ್ಪತ್ತೇಶ್ವರ ಮಹಾಸ್ವಾಮಿಗಳು, ಅಡ್ನೂರಿನ ಅಭಿನವ ಪಂಚಾಕ್ಷರ ಶಿವಾಚಾರ್ಯರು, ಅರಳಿಹಳ್ಳಿಯ ಗವಿಸಿದ್ದೇಶ್ವರ ತಾತನವರು, ಜಿಗೇರಿಯ ಗುರುಸಿದ್ದೇಶ್ವರ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು.

ಈ ಸಂದರ್ಭದಲ್ಲಿ ಅರಳಹಳ್ಳಿ ಬೃಹನ್ಮಠದ ಶರಣಬಸವಯ್ಯ ತಾತನವರ ‘ಲೀಲಾಮೃತ ಪುರಾಣ’ ಹಾಗೂ ‘ವಿಶ್ವಯೋಗಿ ವೇಮ ಮತ್ತು ಮಹಾಸಾಧ್ವಿ ಬದುಕು-ಚಿಂತನೆ’ ಗ್ರಂಥಗಳನ್ನು ಜಗದ್ಗುರುಗಳ ಸಾನ್ನಿಧ್ಯದಲ್ಲಿ ಲೋಕಾರ್ಪಣೆ ಮಾಡಲಾಯಿತು. ಬಳಿಕ ಪಂ. ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘದ ಕಲಾವಿದರು ‘ಬಂಜೆ ತೊಟ್ಟಿಲು’ ಸಾಮಾಜಿಕ ನಾಟಕ ಪ್ರದರ್ಶಿಸಿದರು.

“ವೀರೇಶ್ವರ ಪುಣ್ಯಾಶ್ರಮದೊಳಗೆ ಜಾತಿ, ರಾಜಕಾರಣ ಹಾಗೂ ಸ್ವಾರ್ಥದ ಪ್ರವೇಶಕ್ಕೆ ಅವಕಾಶ ಇರಬಾರದು. ಪರಂಪರೆ ಮತ್ತು ಪಾವಿತ್ರ್ಯ ಉಳಿಸುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿ.”

ಜ. ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img