ವಿಜಯನಗರ: ಕೌಟುಂಬಿಕ ಕಲಹ ಹಿನ್ನೆಲೆ ಪತ್ನಿಯನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣದ ಆಗಸರ ಓಣಿಯಲ್ಲಿ ನಡೆದಿದೆ.
ಪ್ರಭಾವತಿ (50) ಹತ್ಯೆಯಾದ ಮಹಿಳೆ ಎಂದು ಗುರುತಿಸಲಾಗಿದ್ದು, ಆಕೆಯ ಪತಿ ರಾಮಮೂರ್ತಿ (55) ಪತ್ನಿಯನ್ನು ಕತ್ತು ಕೊಯ್ದು ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಇಂದು ಬೆಳಗಿನ ಜಾವ ಅಥವಾ ರಾತ್ರಿ ವೇಳೆಯಲ್ಲಿ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಕೌಟುಂಬಿಕ ಕಲಹವೇ ಈ ದುರಂತಕ್ಕೆ ಕಾರಣವಾಗಿರಬಹುದು ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಘಟನೆ ನಡೆದ ಬಳಿಕ ಆರೋಪಿ ರಾಮಮೂರ್ತಿ ಮನೆಯಲ್ಲೇ ಇದ್ದಿದ್ದು, ಸ್ಥಳಕ್ಕೆ ಆಗಮಿಸಿದ ಪಟ್ಟಣ ಠಾಣೆ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಕೂಡಲೇ ಸ್ಥಳಕ್ಕೆ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ, ಅಡಿಷನಲ್ ಎಸ್ಪಿ ಮಂಜುನಾಥ್ ಹಾಗೂ ಡಿಎಸ್ಪಿ ಮುರುಳಿಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿ ಪ್ರಕರಣದ ತನಿಖೆ ಆರಂಭಿಸಲಾಗಿದೆ.
ಮೃತದೇಹವನ್ನು ಪೊಲೀಸರು ವಶಕ್ಕೆ ಪಡೆದು ಶವ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣ ಸಂಬಂಧ ಹೊಸಪೇಟೆ ಪಟ್ಟಣ ಠಾಣೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



