ಹಾವೇರಿ: ರಾಜ್ಯದಲ್ಲಿ ಮಳೆ ಕೊರತೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ ರೈತರ ನೆರವಿಗೆ ಜಿಲ್ಲೆಯ ಶಾಸಕರು ಮುಂದಾಗಿದ್ದಾರೆ.
ಮಂಗಳವಾರದಿಂದ ಜಿಲ್ಲೆಯಲ್ಲಿ ಮೋಡ ಬಿತ್ತನೆ ಕಾರ್ಯ ಆರಂಭಿಸಲು ಸಿದ್ಧತೆ ನಡೆಸಲಾಗಿದೆ.
ಹಾವೇರಿ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಎಂಟು ತಾಲೂಕುಗಳ ಬಹುತೇಕ ರೈತರು ಕೃಷಿಯನ್ನೇ ಅವಲಂಬಿಸಿದ್ದಾರೆ. ಆದರೆ ಈ ಬಾರಿ ಮುಂಗಾರು ಆರಂಭದಲ್ಲಿ ಒಂದೇ ಬಾರಿ ಮಳೆಯಾಗಿದ್ದು, ನಂತರ ಮಳೆ ಕೈಕೊಟ್ಟಿದೆ. ಪರಿಣಾಮ ಹಲವು ಕಡೆ ಬಿತ್ತನೆ ಮಾಡಿದ ಬೀಜ ಮೊಳಕೆಯೊಡೆಯದೆ ಉಳಿದರೆ, ಕೆಲವೆಡೆ ಮೊಳಕೆಯೊಡೆದ ಬೆಳೆಗಳು ತೇವಾಂಶದ ಕೊರತೆಯಿಂದ ಒಣಗುತ್ತಿವೆ.
ಬ್ಯಾಡಗಿ ಹಾಗೂ ಹಾನಗಲ್ ಸೇರಿದಂತೆ ಹಲವು ಭಾಗಗಳಲ್ಲಿ ರೈತರು ಬಿತ್ತನೆ ಮಾಡಿದ ಬೆಳೆ ನಾಶವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಮೋಡ ಬಿತ್ತನೆ ನಡೆಸಬೇಕು ಎಂದು ಒತ್ತಾಯಿಸಿದ್ದರು. ಮಳೆಗಾಗಿ ದೇವರ ಮೊರೆ ಹೋಗಿ ವಿಶೇಷ ಪೂಜೆ, ಕಪ್ಪೆ ಮದುವೆ ಸೇರಿದಂತೆ ವಿವಿಧ ಆಚರಣೆಗಳನ್ನು ಸಹ ರೈತರು ನಡೆಸಿದ್ದಾರೆ.
ರೈತರ ಸಂಕಷ್ಟವನ್ನು ಮನಗಂಡು ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ನೇತೃತ್ವದಲ್ಲಿ ಮಂಗಳವಾರದಿಂದ ಮೋಡ ಬಿತ್ತನೆ ನಡೆಸಲು ನಿರ್ಧರಿಸಲಾಗಿದೆ. ಈ ಸಂಬಂಧ ಈಗಾಗಲೇ ಸಂಬಂಧಿತ ಇಲಾಖೆಯಿಂದ ಅನುಮತಿ ದೊರೆತಿದ್ದು, ಜಿಲ್ಲೆಯ ಆರು ಮಂದಿ ಶಾಸಕರು ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ.
ಪ್ರಕಾಶ್ ಕೋಳಿವಾಡ ಅವರ ಸ್ವಂತ ವಿಮಾನದ ಮೂಲಕವೇ ಮೋಡ ಬಿತ್ತನೆ ನಡೆಸಲಾಗುತ್ತದೆ. ಈ ಕಾರ್ಯಕ್ಕೆ ಪ್ರತಿ ಗಂಟೆಗೆ ಸುಮಾರು ₹15 ಲಕ್ಷ ವೆಚ್ಚವಾಗಲಿದ್ದು, ಅದನ್ನು ಜಿಲ್ಲೆಯ ಆರು ಕ್ಷೇತ್ರಗಳ ಶಾಸಕರು ತಮ್ಮ ಸ್ವಂತ ಖರ್ಚಿನಲ್ಲಿ ಭರಿಸಲು ಮುಂದಾಗಿದ್ದಾರೆ.
ಈ ಹಿಂದೆ ಬರ ಪರಿಸ್ಥಿತಿ ಎದುರಾದ ಸಂದರ್ಭದಲ್ಲಿ ಕೂಡ ಪ್ರಕಾಶ್ ಕೋಳಿವಾಡ ಅವರು ಅನುಮತಿ ಪಡೆದು ಮೋಡ ಬಿತ್ತನೆ ನಡೆಸಿದ್ದರು.



